

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಾರವಾರ ರಸ್ತೆಯ ಕೆಂಪಕೆರೆ ಉದ್ಯಾನದ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಉದ್ಯಾನದ ಅಂದ ಹೆಚ್ಚಿಸಲು 2 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಕೆಂಪಕೆರೆ ಉದ್ಯಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ವೀಕ್ಷಿಸಿದ ಅವರು, ಕೆಂಪಕೆರೆ ಉದ್ಯಾನಕ್ಕೆ ವಿದ್ಯುತ್ ದೀಪಾಲಂಕಾರ ಇನ್ನಷ್ಟು ಮೆರಗು ತರಲಿದೆ. ಈ ಕುರಿತು ಖಾಸಗಿ ಸಂಸ್ಥೆಯೊಂದು ಉದ್ಯಾನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದು, ಸಮಗ್ರ ಯೋಜನಾ ವರದಿ ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದರು.
ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಗುತ್ತಿಗೆದಾರರು ಸಬೂಬ ಹೇಳಿ ಕಾಮಗಾರಿ ವಿಳಂಬ ಮಾಡುವುದು ಸರಿಯಲ್ಲ. ಕಳೆದ 4 ವರ್ಷಗಳಲ್ಲಿ ಕೆಂಪಕೆರೆ ಅಭಿವೃದ್ಧಿ ಕಾಮಗಾರಿಗೆ 12 ಕೋಟಿ ರೂ. ಗೂ ಅಧಿಕ ಅನುದಾನ ನೀಡಲಾಗಿದೆ. ಈಗಾಗಲೇ ಮುಕ್ತಾಯಗೊಂಡಿರುವ ಕಾಮಗಾರಿಗಳ ನಿರ್ವಹಣೆಯೂ ಸಹ ಅಷ್ಟೇ ಪ್ರಮುಖವಾಗಿದ್ದು, ಉದ್ಯಾನದ ನಿರ್ವಹಣೆ ಪಾಲಿಕೆಯಿಂದ ವ್ಯವಸ್ಥೆ ಮಾಡುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಶಾಸಕರು ಸೂಚಿಸಿದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಧಿಕಾರಿಗಳಾದ ಎಸ್.ಎನ್. ಗಣಾಚಾರಿ, ಆರ್.ಡಿ. ಕೊಕ್ಕಳಕಿ, ನಾಗರಾಜ ಹವಾಲ್ದಾರ, ಗುತ್ತಿಗೆದಾರರಾದ ಎಸ್.ಆರ್. ರಾಜು, ವೆಂಕಟೇಶ ಮಿಸ್ಕಿನ್, ಈರಣ್ಣ ಹಿರೇಹಾಳ, ಇತರರು ಇದ್ದರು.