ಗಮನ ಸೆಳೆಯುತ್ತಿವೆ ಬೂತ್‌ಗಳು

7-msk-2
ಮಸ್ಕಿಯ ಪುರಸಭೆ ಮತಗಟ್ಟೆಯಲ್ಲಿ ಮತದಾನಕ್ಕೆ ಸಿದ್ಧತೆ ಕೈಗೊಳ್ಳುತ್ತಿರುವುದು.
Published on

ಮಸ್ಕಿ: ಕ್ಷೇತ್ರದ ಆಯ್ದ ಮತಗಟ್ಟೆಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಕ್ಷೇತ್ರದಲ್ಲಿ ಒಟ್ಟು 231 ಮತಗಟ್ಟೆಗಳಿದ್ದು, ಬಣ್ಣ ಬಳಿಯಲಾಗಿದೆ. ವಿದ್ಯುತ್ ದೀಪ, ಫ್ಯಾನ್, ಅಂಗವಿಕಲರಿಗಾಗಿ ರ‌್ಯಾಂಪ್, ಮಹಿಳೆಯರು ಹಾಗೂ ಪುರುಷರ ಶೌಚಗೃಹ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಬ್ಯಾನರ್, ವಿಶೇಷ ರೀತಿಯ ಟೆಂಟ್, ಅಲಂಕಾರಿಕ ಕ್ರಮಗಳನ್ನು ಕ್ರಮಕೈಗೊಳ್ಳಲಾಗುತ್ತಿದೆ.

ಮಹಿಳಾ ಮತದಾರರನ್ನು ಸೆಳೆಯಲು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ದಕ್ಷಿಣ ಭಾಗ), ತುರ್ವಿಹಾಳ ಪಟ್ಟಣ ಪಂಚಾಯಿತಿ, ಬಳಗಾನೂರು ಪಟ್ಟಣ ಪಂಚಾಯಿತಿ (ಉತ್ತರ ಭಾಗ), ಬಪ್ಪೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮಸ್ಕಿ ಪುರಸಭೆ ಕಚೇರಿ ಕಟ್ಟಡದಲ್ಲಿ (ಪೂರ್ವಭಾಗ) ಅಂಗವಿಕಲರು, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಧನಗರವಾಡಿಯಲ್ಲಿ (ಉತ್ತರ ಭಾಗ) ಮಾದರಿ ಮತಗಟ್ಟೆ, ದುರ್ಗಾಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸಕಲ ಸೌಕರ್ಯ ಒದಗಿಸಲಾಗುತ್ತಿದೆ.

ಮತಗಟ್ಟೆಯ ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಗ್ರಾಮೀಣ ಬದುಕಿನ ಸೊಗಡು ವಿವರಿಸುವುದರೊಂದಿಗೆ ಯಕ್ಷಗಾನ, ಬಯಲಾಟದ ಚಿತ್ರಗಳು, ನನ್ನ ಮತ ನನ್ನ ಹಕ್ಕು, ಮತದಾನ ಹಬ್ಬ, ಸಾಲಾಗಿ ಬನ್ನಿ ಮತದಾನ ಮಾಡಿ ಎಂಬ ಘೋಷವಾಕ್ಯಗಳನ್ನು ಬರೆಯಲಾಗಿದೆ.

ಶೇಕಡವಾರು ಮತದಾನ ಪ್ರಮಾಣ ಹೆಚ್ಚಳಕ್ಕೆ ವಿಶೇಷ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ನರೇಗಾ ಕಾಮಗಾರಿ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಸ್ವೀಪ್ ಚಟುವಟಿಕೆಯಡಿ ಮತದಾನದ ಜಾಗೃತಿ ಮೂಡಿಸಲಾಗಿದೆ.
ಪವನಕುಮಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಮಸ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net