ಸಾವಿರ ಕಂಬದ ಬಸದಿಗೆ ವಿದ್ಯುತ್‌ಚಾಲಿತ ಆನೆ : 6 ಲಕ್ಷ ರೂ. ವೆಚ್ಚದಲ್ಲಿ ನಟಿ ರವೀನಾ ಟಂಡನ್ ಕೊಡುಗೆ

New Project (44)
Published on

ಯಶೋಧರ ವಿ.ಬಂಗೇರ ಮೂಡುಬಿದಿರೆ

ಇತಿಹಾಸ ಪ್ರಸಿದ್ಧ ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಇನ್ನು ಮುಂದೆ ಆನೆ ಕಾಣಿಸಿಕೊಳ್ಳಲಿದೆ. ಐರಾವತ ಹೆಸರಿನ ವಿದ್ಯುತ್ ಚಾಲಿತ ಆನೆಯನ್ನು ನಟಿ ರವೀನಾ ಟಂಡನ್ ಮತ್ತು ಅವರ ಪುತ್ರಿ ಪ್ರಾಣಿದಯಾ ಸಂಘದ ಮುಖೇನ ಕೊಡುಗೆಯಾಗಿ ನೀಡಲಿದ್ದಾರೆ.

ಆ.29ರಂದು ಪ್ರದಾನ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸ್ಥಳಗಳಲ್ಲಿ ಆನೆಗಳ ಪೋಷಣೆ ಕಷ್ಟವಾಗುವುದರಿಂದ ದೇಶದ 12 ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಐರಾವತ ಹೆಸರಿನ ವಿದ್ಯುತ್ ಚಾಲಿತ ಆನೆ ಯೋಜನೆಯನ್ನು ಪೇಟಾ ರೂಪಿಸಿ ಆನೆಯ ಪ್ರತಿಕೃತಿಯನ್ನು ದಾನವಾಗಿ ನೀಡುತ್ತಿದೆ. ಈ ಯೋಜನೆಯಂತೆ ಮೂಡುಬಿದಿರೆ ಸಾವಿರ ಕಂಬ ಬಸದಿಗೂ ಪೇಟಾ ಕೊಡುಗೆ ನೀಡಲಿದೆ. ಇದರ ವೆಚ್ಚ ಸುಮಾರು 6 ಲಕ್ಷ ರೂ. ಆಗಿದ್ದು, ಬಾಲಿವುಡ್ ನಟಿ ರವಿನಾ ಟಂಡನ್ ಹಾಗೂ ಅವರ ಮಗಳು ನಟಿ ರಾಶಾ ಥಡಾನಿ ದಾನ ನೀಡಲಿದ್ದಾರೆ.

ಹಲವಾರು ವಿಶೇಷತೆ ಒಳಗೊಂಡಿರುವ ಅಪೂರ್ವ ಶಿಲಾ ಕೆತ್ತನೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ಸಾವಿರ ಕಂಬದ ಬಸದಿಯಲ್ಲಿ ಪೇಟಾ ಮುಖಾಂತರ ಯಾಂತ್ರೀಕೃತ ಆನೆ ಕೊಡುಗೆ ನೀಡಿದ್ದು, ಯಾತ್ರಿಗಳನ್ನು ಸೆಳೆಯಲಿದೆ. ಪೇಟಾದ ಈ ಯೋಜನೆಯನ್ನು ನಮ್ಮ ಬಸದಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಪ್ರಥಮ

ದೇಶದಲ್ಲಿ 12 ವಿವಿಧ ಧಾರ್ಮಿಕ ಕೇಂದ್ರಗಳಿಗೆ ವಿವಿಧ ದಾನಿಗಳ ಮೂಲಕ ಆನೆಗಳನ್ನು ಕೊಡುಗೆಯಾಗಿ ನೀಡಿದೆ. ಮೈಸೂರಿನ ಸುತ್ತೂರು ಮಠ, ಎಡೆಯೂರು, ದಾವಣಗೆರೆಯ ಧಾರ್ಮಿಕ ಕೇಂದ್ರಗಳಿಗೂ ಪೇಟಾ ಈ ಕೊಡುಗೆ ನೀಡಿದೆ. ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಕೊಡುಗೆ ನೀಡಲಾಗುತ್ತಿದೆ. ಜೈನ ಬಸದಿಯೊಂದರಲ್ಲಿ ದೇಶದಲ್ಲೇ ಇದೇ ಮೊದಲ ಬಾರಿಗೆ ಈ ಮೂಲಕ ಕೊಡುಗೆ ನೀಡಿದಂತಾಗಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಆನೆಗಳ ನಿರ್ವಹಣೆ ಕಷ್ಟವಾಗಿರುವುದನ್ನು ಗಮನಿಸಿದ ನಮ್ಮ ಸಂಸ್ಥೆ ಯಾಂತ್ರೀಕೃತ ಆನೆ ನೀಡುವ ಯೋಜನೆ ರೂಪಿಸಿದೆ. ಮೂಡುಬಿದಿರೆಗೆ ನೀಡುವ ಈ ಆನೆಯನ್ನು ನಾವು ಕೇರಳದಲ್ಲಿ ತಯಾರಿಸಿದ್ದೇವೆ. ವಿಶೇಷ ಪರಂಪರೆಯನ್ನು ಹೊಂದಿರುವ ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಈ ಕೊಡುಗೆ ನೀಡುವುದು ನಮಗೆ ಸಂತೋಷದ ವಿಚಾರ. ಅರುಣ್ ಕುಮಾರ್, ಪೇಟಾ ಅಧಿಕಾರಿ  ಜೈನಕಾಶಿ ಮೂಡುಬಿದಿರೆಯನ್ನು ವಿಶ್ವಮಟ್ಟದಲ್ಲಿ ಸೆಳೆಯುವ ಸಾವಿರ ಕಂಬದ ಬಸದಿಯಲ್ಲಿ ಪೇಟಾದ ಯಾಂತ್ರೀಕೃತ ಆನೆ ಪರಿಕಲ್ಪನೆ ಅನುಷ್ಠಾನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಅದನ್ನು ಜತನದಿಂದ ಕಾಪಾಡಿಕೊಳ್ಳುವ ವ್ಯವಸ್ಥೆಯನ್ನು ನಾವು ಮಠದ ವತಿಯಿಂದ ಮಾಡುತ್ತೇವೆ. ಭಟ್ಟಾರಕ ಸ್ವಾಮೀಜಿ, ಮೂಡುಬಿದಿರೆ ಜೈನಮಠ https://www.vijayavani.net/kadiru-festival https://www.vijayavani.net/service-disruption-at-kukke-temple

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net