ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನಗಳು ಸಂಪೂರ್ಣ ಬೆಂಕಿಗಾಹುತಿ

Published on

ಮೈಸೂರು: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲೆಕ್ಟ್ರಿಕ್ ಕಾರು, ದ್ವಿಚಕ್ರ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.
ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಕುಂಬಾರಕೊಪ್ಪಲು 6ನೇ ಕ್ರಾಸ್‌ನಲ್ಲಿರುವ ಗುಂಡಪ್ಪಗೌಡ ಅವರ ಮನೆಯಲ್ಲಿ ಬುಧವಾರ ಬೆಳಗಿನ ಜಾವ ಅನಾಹುತ ಸಂಭವಿಸಿದೆ. ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಸುಟ್ಟು ಹೋಗಿವೆ.
ಬುಧವಾರ ಬೆಳಗಿನ ಜಾವ ಮನೆಯ ಹೊರ ಆವರಣದಲ್ಲಿ ಇದ್ದ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ಜ್ವಾಲೆ ಅಕ್ಕಪಕ್ಕದ ವಾಹನಗಳನ್ನು ಆವರಿಸಿದೆ. ಬೆಂಕಿಯ ಶಾಖಕ್ಕೆ ಮನೆಯ ಕಿಟಕಿ ಗಾಜುಗಳು ಒಡೆದು ಹೋಗಿದ್ದಲ್ಲದೆ ಕಿಟಕಿಗಳಿಗೆ ಹಾಕಿದ್ದ ಪರದೆ (ಸ್ಕ್ರೀನ್) ಸುಟ್ಟು ಹೋಗಿದೆ.
ಮನೆಯಲ್ಲಿ ಮಲಗಿದ್ದ ಗುಂಡಪ್ಪಗೌಡ, ಅವರ ಪತ್ನಿ ನಾಗಮ್ಮ, ಪುತ್ರ ನರೇಂದ್ರ, ಸೊಸೆ ಸೌಮ್ಯಾ ಮತ್ತು ಇಬ್ಬರು ಮೊಮ್ಮಕ್ಕಳು ಹೊರಗೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
ಯಾವ ಕಾರಣದಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ತನಿಖೆಯಿಂದ ತಿಳಿದು ಬರಲಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು. ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net