ಮೈಸೂರು ಮಹಿಳೆಯರಿಗೆ ಎಲೆಕ್ಟ್ರಿಕ್‌ಆಟೋ ಭಾಗ್ಯ..!

electric auto
Published on

ಸದೇಶ್ ಕಾರ್ಮಾಡ್ ಮೈಸೂರು
ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಗರ ಪಾಲಿಕೆಯು ಪ್ರಥಮ ಬಾರಿಗೆ ಎಲೆಕ್ಟ್ರಿಕ್ ಆಟೋ ನೀಡುವ ಯೋಜನೆ ಜಾರಿಗೊಳಿಸಲು ಸಿದ್ಧತೆ ಕೈಗೊಂಡಿದ್ದು, ಸದ್ಯದಲ್ಲಿಯೇ ಸಾಂಸ್ಕೃತಿಕ ನಗರಿಯಲ್ಲಿ ಮಹಿಳಾ ಆಟೋ ಚಾಲಕರ ಸಂಖ್ಯೆಯೂ ವೃದ್ಧಿಸಲಿದೆ.

ನಗರದಲ್ಲಿ ಪ್ರಸ್ತುತ ಬೆರಳೆಣಿಕೆಯಷ್ಟು ಮಹಿಳೆಯರು ಆಟೋ ರಿಕ್ಷಾ ಚಾಲನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಸಾಲಿಗೆ ಪ್ರಸ್ತಕ ಸಾಲಿನಲ್ಲಿ ಮತ್ತೆ 20 ಮಹಿಳೆಯರು ಸೇರ್ಪಡೆಗೊಳ್ಳಲಿದ್ದಾರೆ. ಅರ್ಹ ಬಡ ವರ್ಗದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಇದೊಂದು ಅತ್ಯುತ್ತಮ ಯೋಜನೆಯಾಗಿದೆ. ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದು, ಆಟೋ ರಿಕ್ಷಾ ಚಾಲನೆಯಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಈಗಾಗಲೇ ನಗರದಲ್ಲಿ ಮಹಿಳೆಯರು ಆಟೋ ಚಾಲನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಜಾರಿಗೆ ತಂದಿರುವ ಯೋಜನೆ ಲಾಭ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮುಂದೆ ಬರುವ ನಿರೀಕ್ಷೆ ಇದೆ.

ಯಾರಿಗೆ ದೊರೆಯಲಿದೆ ಆಟೋ?:

ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕಾರ್ಡ್ ಹೊಂದಿರುವ 10 ಮಹಿಳೆಯರಿಗೆ ಹಾಗೂ ಆರ್ಥಿಕ ವಾಗಿ ಹಿಂದುಳಿದ ಬಿಪಿಎಲ್ ಕಾರ್ಡ್ ಹೊಂದಿರುವ 10 ಮಹಿಳೆಯರಿಗೆ ಆಟೋ ನೀಡಲಾಗುವುದು. ಆಟೋ ಪಡೆಯುವ ಮಹಿಳೆಯರು ಕಡ್ಡಾಯವಾಗಿ ಚಾಲನಾ ಪರವಾನಗಿ (ಡಿಎಲ್) ಹೊಂದಿರಬೇಕು. ನಿಗದಿತ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾ ದರೆ ವಿಧವೆಯರು, ಒಂಟಿ ಮಹಿಳೆಯರು, ಆರ್ಥಿಕವಾಗಿ ತೀರಾ ಹಿಂದುಳಿದವರು ಹಾಗೂ ಅವರ ಕುಟುಂಬದ ಪರಿಸ್ಥಿತಿ ಅವಲೋಕಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ನಗರದಲ್ಲಿ ಪ್ರಸ್ತುತ ಆರೇಳು ಮಹಿಳೆಯರು ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಅದರಲ್ಲೂ ಸಕ್ರೀಯವಾಗಿ ಚಾಲನೆ ಮಾಡು ವವರ ಸಂಖ್ಯೆ ಮೂರ‌್ನಾಲ್ಕು ಮಾತ್ರ. ನಗರದಲ್ಲಿ ಹತ್ತಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋಗಳು ಸಂಚರಿಸುತ್ತಿವೆ. ನಗರ ಪಾಲಿಕೆಯ ಹೊಸ ಯೋಜನೆ ಜಾರಿಯಾದರೆ ನಗರದಲ್ಲಿ ಮಹಿಳಾ ಆಟೋ ರಿಕ್ಷಾ ಚಾಲಕರ ಜತೆಗೆ ಎಲೆಕ್ಟ್ರಿಕ್ ಆಟೋಗಳ ಸಂಖ್ಯೆ ಸಹ ಹೆಚ್ಚಾಗಲಿದೆ.

ಪ್ರಸ್ತುತ ನಗರದ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಇಲ್ಲ. ಹಾಗಾಗಿ ಮನೆಯಲ್ಲಿಯೇ ಬ್ಯಾಟರಿಯನ್ನು ಚಾರ್ಚ್ ಮಾಡಿಕೊಳ್ಳಬೇಕು. ನಗರದಲ್ಲಿ ಎಲೆಕ್ಟ್ರಿಕ್ ಆಟೋಗಳ ಸಂಖ್ಯೆ ಹೆಚ್ಚಾದರೆ ಚಾರ್ಚಿಂಗ್ ಪಾಯಿಂಟ್‌ಗಳು ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೆ, ಪ್ರಸ್ತುತ ಎಲೆಕ್ಟ್ರಿಕ್ ಆಟೋದ ಬ್ಯಾಟರಿ ದುಬಾರಿಯಾಗಿದ್ದು, ಬಳಕೆದಾರರ ಸಂಖ್ಯೆ ಹೆಚ್ಚಾದರೆ ಇದರ ದರವೂ ಕಡಿಮೆಯಾಗುವ ನಿರೀಕ್ಷೆ ಇದೆ.

ಮಾಲಿನ್ಯದ ಪ್ರಮಾಣ ತಗ್ಗಿಸಲು ಸಹಕಾರಿ

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ತಗ್ಗಿಸಲು 2020ರಲ್ಲಿ ಎಲೆಕ್ಟ್ರಿಕ್ ವಾಹನಗಳ ನೀತಿ ಜಾರಿಗೊಳಿಸಿತು. ಭವಿಷ್ಯದಲ್ಲಿ ದೆಹಲಿಯನ್ನು ಎಲೆಕ್ಟ್ರಿಕ್ ವಾಹನಗಳ ರಾಜಧಾನಿಯಾಗಿ ರೂಪಿಸಲು ಉದ್ದೇಶಿಸಲಾಗಿದೆ. ಇದರ ಭಾಗವಾಗಿ ಸಾವಿರಾರು ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಬೀದಿಗಿಳಿದಿದ್ದು, ಸರ್ಕಾರ ಸಬ್ಸಿಡಿ ಸೇರಿದಂತೆ ವಿವಿಧ ಪ್ರೋತ್ಸಾಹವನ್ನು ಎಲೆಕ್ಟ್ರಿಕ್ ವಾಹನಗಳಿಗೆ ನೀಡುತ್ತಿವೆ. ದೆಹಲಿ ಮಾದರಿಯಲ್ಲಿ ಸಾಂಸ್ಕೃತಿಕ ನಗರಿಯಲ್ಲೂ ವಾಯು ಮಾಲಿನ್ಯ ತಡೆಗಟ್ಟಲು ನಗರ ಪಾಲಿಕೆ ಮಹತ್ವದ ಹೆಜ್ಜೆ ಇರಿಸಿರುವುದು ಉತ್ತಮ ಬೆಳವಣಿಗೆ.

ಸವಾಲುಗಳ ಹಾದಿಯಲ್ಲಿ ಆಟೋ ಚಾಲಕರು

ಆಟೋ ರಿಕ್ಷಾ ಚಾಲನೆ ಮಾಡಿ ಸಾಕಷ್ಟು ಜನರು ಉತ್ತಮ ಬದುಕು ಕಂಡುಕೊಂಡಿದ್ದಾರೆ. ಆದರೆ, ಆಟೋ ರಿಕ್ಷಾ ಕ್ಷೇತ್ರ ಇದೀಗ ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ದಿನೇ ದಿನೆ ಏರಿಕೆಯಾಗುತ್ತಿರುವ ಪೆಟ್ರೋಲ್, ಗ್ಯಾಸ್ ಹಾಗೂ ಬಿಡಿ ಭಾಗಗಳ ದರದಿಂದ ಆಟೋ ಚಾಲಕರು ಕಂಗೆಟ್ಟಿದ್ದಾರೆ. ಪೆಟ್ರೋಲ್, ಗ್ಯಾಸ್ ಆಟೋಗಳಿಗೆ ಪರ್ಯಾಯವಾಗಿ ಇದೀಗ ಎಲೆಕ್ಟ್ರಿಕ್ ಆಟೋಗಳು ಬೀದಿಗಿಳಿಯುತ್ತಿವೆ. ಎಲೆಕ್ಟ್ರಿಕ್ ಆಟೋ ಬಳಕೆಯು ಆಟೋ ಚಾಲಕರಿಗೆ ಒಂದಷ್ಟು ಆದಾಯ ತಂದುಕೊಡಬಲ್ಲದು. ಆದರೆ, ಪ್ರಸ್ತುತ ನಗರದಲ್ಲಿ 28 ಸಾವಿರ ಆಟೋಗಳು ಇದ್ದು, ಪ್ರತಿ ವರ್ಷ ನೂರಾರು ಸಂಖ್ಯೆಯಲ್ಲಿ ಹೊಸ ಆಟೋಗಳು ರಸ್ತೆಗಿಳಿಯುತ್ತಿವೆ. ಆಟೋ ರಿಕ್ಷಾ ಚಾಲನೆಯನ್ನು ವೃತ್ತಿಯಾಗಿ ಸ್ವೀಕರಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರುವ ಆಟೋ ಚಾಲಕರಿಗೆ ಬಾಡಿಗೆ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ, ಬೈಕ್‌ಟ್ಯಾಕ್ಸಿ, ಕ್ಯಾಬ್‌ಗಳಿಂದ ಆಟೋ ರಿಕ್ಷಾದ ಬೇಡಿಕೆ ಕಡಿಮೆಯಾಗಿದೆ. ಇದೀಗ ಹೆಣ್ಣು ಮಕ್ಕಳಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಆಟೋ ರಿಕ್ಷಾದವರಿಗೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇಂತಹ ಸವಾಲುಗಳ ಹಾದಿಯಲ್ಲಿ ಮಹಿಳಾ ಆಟೋ ಚಾಲಕರು ಸಹ ಸಾಗಬೇಕಾಗಿದೆ.

ಹೆಣ್ಣು ಮಕ್ಕಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಬಾರಿಯ ಬಜೆಟ್‌ನಲ್ಲಿ ಆರ್ಥಿಕವಾಗಿ ಹಿಂದು ಳಿದಿರುವ ಹೆಣ್ಣು ಮಕ್ಕಳಿಗೆ ಆಟೋ ರಿಕ್ಷಾ ನೀಡಲು ನಿರ್ಧರಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಸಭೆ ನಡೆಸಲಾಗುವುದು. ನಂತರ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿ ಆಟೋ ರಿಕ್ಷಾ ನೀಡಲಾಗುವುದು. ಯಾವುದೇ ಕಾರಣಕ್ಕೂ ಯೋಜನೆ ಜಾರಿಯಲ್ಲಿ ವಿಳಂಬ ಮಾಡುವುದಿಲ್ಲ. ಫಲಾನುಭವಿಗಳ ಆಯ್ಕೆ ಸಂದರ್ಭ ಲೋಪಗಳು ಆಗದಂತೆ ಎಚ್ಚರ ವಹಿಸಲು ಸ್ಕ್ರೀನಿಂಗ್ ಕಮಿಟಿ ರಚಿಸಲಾಗುವುದು. ಅರ್ಹರಿಗೆ ಯೋಜನೆ ಲಾಭ ದೊರೆತು ಅವರ ಕುಟುಂಬ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂಬುದೇ ನಮ್ಮ ಉದ್ದೇಶ.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net