

ಮಡಿಕೇರಿ: ೨೦೨೪ರ ಜೂ.೨೧ಕ್ಕೆ ಅವಧಿ ಪೂರ್ಣಗೊಳ್ಳಲಿರುವ ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆದಿದ್ದು, ಆ ನಿಟ್ಟಿನಲ್ಲಿ ಇದುವರೆಗೆ ಹೆಸರು ನೋಂದಾಯಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ನ.೨೩ ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ನ.೨೩ ರಿಂದ ಡಿ.೯ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-೧೮ ಮತ್ತು ೧೯ರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಅವಧಿಯಲ್ಲಿ (ನ.೨೩ ರಿಂದ ಡಿ.೯ ರವರೆಗೆ) ಕೊಡಗು ಜಿಲ್ಲೆಯಲ್ಲಿ ಒಟ್ಟು ೨೪೫ ಅರ್ಜಿ ಸ್ವೀಕರಿಸಿದ್ದು, ೧೯೯ ಅರ್ಜಿಗಳನ್ನು ಅಂಗೀಕರಿಸಲಾಗಿದೆ. ೧೫ ಅರ್ಜಿಗಳು ತಿರಸ್ಕೃತಗೊಂಡಿದ್ದು, ೩೧ ಅರ್ಜಿಗಳನ್ನು ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ (ನ.೨೩ ರಿಂದ ಡಿ.೯ ರವರೆಗೆ) ೭೦೭ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ೬೧೬ ಅರ್ಜಿಗಳು ಅಂಗೀಕಾರವಾಗಿದೆ. ೨೮ ಅರ್ಜಿಗಳು ತಿರಸ್ಕೃತಗೊಂಡಿದ್ದು, ೬೩ ಅರ್ಜಿಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಮೂನೆ-೧೮ ಮತ್ತು ನಮೂನೆ-೧೯ರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಡಾಟಾ ಎಂಟ್ರಿ ಮಾಡಿದ್ದು, ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯ ಅನುಸಾರ ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು ಇದುವರೆಗೆ ೧೧೭೪ ಮತದಾರರು ಇದ್ದು, ಇವರಲ್ಲಿ ೩೯೨ ಪುರುಷ ಮತದಾರರು, ೭೮೨ ಮಹಿಳಾ ಮತದಾರರು ಇದ್ದಾರೆ. ತಾಲೂಕುವಾರು ಗಮನಿಸಿದಾಗ ಮಡಿಕೇರಿ ೩೯೧, ಸೋಮವಾರಪೇಟೆ ೧೨೪, ವಿರಾಜಪೇಟೆ ೧೭೫, ಕುಶಾಲನಗರ ೨೪೪ ಮತ್ತು ಪೊನ್ನಂಪೇಟೆ ೨೪೦ ಮತದಾರರು ಇದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೩೬೧೬ ಮತದಾರರು ಇದ್ದು, ೧೫೪೯ ಪುರುಷ ಮತದಾರರು, ೨೦೬೬ ಮಹಿಳಾ ಮತದಾರರು ಇದ್ದಾರೆ. ಇತರೆ ಒಬ್ಬರು ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ೧೧೦೦, ಸೋಮವಾರಪೇಟೆ ೭೩೨, ವಿರಾಜಪೇಟೆ ೫೮೦, ಕುಶಾಲನಗರ ೭೧೩, ಪೊನ್ನಂಪೇಟೆ ೪೯೧ ಮಂದಿ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಇನ್ನು ಹೆಸರು ನೋಂದಾಯಿಸದೆ ಇರುವವರು ನಿರಂತರ ಪರಿಷ್ಕರಣೆ ಅವಧಿಯಲ್ಲಿ ನಮೂನೆ-೧೮ ಮತ್ತು ನಮೂನೆ-೧೯ ರ ಅರ್ಜಿಗಳನ್ನು ಸಲ್ಲಿಸಿ, ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ಸಂಬಂಧಪಟ್ಟ ತಾಲೂಕು ಕಚೇರಿಗಳನ್ನು ಸಂಪರ್ಕಿಸಬಹುದು. ಹಾಗೂ www.ceokarnataka.kar.nic.in ವೆಬ್‌ಸೈಟ್‌ನಲ್ಲಿಯೂ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಚುನಾವಣಾ ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್, ಇತರರು ಇದ್ದರು.
ಮುಖಂಡರ ಜೊತೆ ಚರ್ಚೆ
ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜತೆ ಅಂತಿಮ ಮತದಾರರ ಪಟ್ಟಿಯ ಸಂಬಂಧ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿದರು. ಜತೆಗೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರಮುಖರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ತೆನ್ನಿರಾ ಮೈನಾ(ಕಾಂಗ್ರೆಸ್), ಅಪ್ಪಣ್ಣ(ಬಿಜೆಪಿ), ಗುಲಾಬಿ ಜನಾರ್ದನ(ಜೆಡಿಎಸ್), ಕೆ.ಎಸ್.ಹರೀಶ್(ಬಿಎಸ್‌ಪಿ), ಎಚ್.ಬಿ.ರಮೇಶ್(ಸಿಪಿಐ(ಎಂ) ಇದ್ದರು.