ಮಳೆಗಾಲದಲ್ಲಿ ಪದೇಪದೇ ಕರೆಂಟ್ ಟ್ರಿಪ್ ಸಮಸ್ಯೆ, ರೈತರ ಟೀಕೆ

10CBP4a
Published on

ಚಿಕ್ಕಬಳ್ಳಾಪುರ: ನಿರ್ವಹಣೆ ಕಾಮಗಾರಿಗಳ ಜತೆಗೆ ಹವಾಮಾನ ವೈಪರೀತ್ಯದಿಂದ ಪದೇಪದೇ ವಿದ್ಯುತ್ ವ್ಯತ್ಯಯ ಕಿರಿಕಿರಿ ತಲೆ ನೋವಿಗೆ ಕಾರಣವಾಗಿದೆ.

ಹೌದು! ಬೇಸಿಗೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಯೂನಿಟ್‌ಗಳ ಅಭಾವ. ಮಳೆಗಾಲದಲ್ಲಿ ಜೋರುಗಾಳಿ, ಉರುಳಿ ಬೀಳುವ ಮರಗಳು ಮತ್ತು ಕಂಬಗಳು ಸೇರಿದಂತೆ ನಾನಾ ಸಮಸ್ಯೆಗಳಿಂದ ವಿದ್ಯುತ್ ಸಮಸ್ಯೆ ಉದ್ಭವವಾಗುವುದು ವಾಡಿಕೆಯಾಗಿದೆ.

ಈಗಾಗಲೇ ಗ್ರಾಮಗಳಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಪೂರೈಕೆಯಾಗುತ್ತದೆ ಎಂಬುದರ ಖಚಿತತೆಯ ಇರುವುದಿಲ್ಲ. ಇದರ ನಡುವೆ ನಗರ, ಪಟ್ಟಣ ಪ್ರದೇಶಗಳಲ್ಲಿ ಲೈನ್ ಟ್ರಿಪ್, ಗಂಟೆಗಟ್ಟಲೇ ವ್ಯತ್ಯಯ, ಕಡಿಮೆ ವೋಲ್ಟೇಜ್ ಕಿರಿಕಿರಿ ಜಾಸ್ತಿಯಾಗಿದೆ.

ಇತ್ತೀಚೆಗೆ ನಿರಂತರವಾಗಿ ಹೊಸ ಮಾರ್ಗದಲ್ಲಿ ತಂತಿ ಅಳವಡಿಕೆ, ಕಡಿತದ ತಂತಿ ದುರಸ್ತಿ, ವಿದ್ಯುತ್ ಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ನಿರ್ದಿಷ್ಟ ಪ್ರದೇಶಗಳ ಅಧಿಕೃತ ಲೋಡ್ ಶೆಡ್ಡಿಂಗ್ ಅವಧಿಯನ್ನು ಪ್ರಕಟಿಸುತ್ತಿದೆ. ಇದನ್ನು ಹೊರತುಪಡಿಸಿದ ಸಮಯದಲ್ಲಿಯೂ ಹಲವು ಬಾರಿ ಕರೆಂಟು ಬಂದು ಹೋಗುವಿಕೆಯು ಟೀಕೆಗೆ ಕಾರಣವಾಗಿದೆ.

*ವಿದ್ಯುತ್ ಕಡಿತದ ಹೊಡೆತ

ರಾಜ್ಯ ಸರ್ಕಾರದ ಆದೇಶದಂತೆ ರೈತರಿಗೆ ನಿಗದಿತ ಅವಧಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಕಡಿಮೆ ವೋಲ್ಟೇಜ್, ಟ್ರಿಪ್‌ಗೆ ಕೃಷಿ ಜಮೀನಿನಲ್ಲಿನ ಕೊಳವೆ ಬಾವಿಗಳ ಮೋಟಾರುಗಳು ಮತ್ತು ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಇದರ ದುರಸ್ತಿಯೇ ದೊಡ್ಡ ಕಿರಿಕಿರಿಯಾಗಿದೆ.

ಪ್ರಸ್ತುತ ಮುಂಗಾರು ಪೂರ್ವ ಉತ್ತಮ ಮಳೆ ಬೀಳುತ್ತಿರುವುದರಿಂದ ಕೃಷಿ ಜಮೀನುಗಳಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಇತ್ತೀಚಿಗಿನ ದಿನಗಳಲ್ಲಿ ಕೊಳವೆ ಬಾವಿಗಳ ವಿದ್ಯುತ್ ಪಂಪ್ ಮೋಟಾರ್ ಅಳವಡಿಕೆಯ ಜತೆಗೆ ಶೆಡ್ಡುಗಳಲ್ಲಿ ಇತರ ಯಂತ್ರೋಪರಣಗಳ ಬಳಕೆ, ಕೊಳವೆ ಬಾವಿ ಕೊರೆಸುವುದು ಸೇರಿದಂತೆ ನಾನಾ ಚಟುವಟಿಕೆಯು ಹೆಚ್ಚಾಗಿದೆ.

ಮತ್ತೊಂದೆಡೆ ರೈತರಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಈ ಅವಧಿಯಲ್ಲಿ ಪದೇ ಪದೇ ಕಡಿತಗೊಳ್ಳುವುದು ಪ್ರಮುಖ ಸಮಸ್ಯೆಯಾಗಿದೆ.

*ಯುಪಿಎಸ್‌ಗಳ ಸಮಸ್ಯೆ

ಇತ್ತೀಚೆಗೆ ವಿದ್ಯುತ್ ಅಭಾವದಿಂದ ಯುಪಿಎಸ್‌ಗಳು ಕೆಲವೇ ಗಂಟೆಗಳಲ್ಲಿ ಪವರ್ ಕಳೆದುಕೊಳ್ಳುತ್ತಿದ್ದು ಇದರಿಂದ ಫ್ಯಾನು, ಎಸಿ, ಫ್ರಿಡ್ಜ್, ಮಿಕ್ಸಿ, ಗ್ರೆöÊಂಡರ್ ಸೇರಿದಂತೆ ಬಳಕೆಯ ನಾನಾ ಯಂತ್ರೋಪಕರಣಗಳು ಸ್ಥಗಿತಗೊಳ್ಳುತ್ತಿವೆ. ಇನ್ನು ಹೋಟೆಲ್, ಗುಡಿ ಕೈಗಾರಿಕೆಗಳು ಹಲವೆಡೆ ಸಮಸ್ಯೆ ಅನುಭವಿಸುವಂತಾಗಿದೆ.

*ಮಳೆಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಅಭಾವವು ಹೆಚ್ಚಿಗೆ ಕಾಡುತ್ತಿಲ್ಲ. ಆದರೆ, ಇತ್ತೀಚೆಗೆ ಪದೇ ಪದೇ ಟ್ರಿಪ್ ಆಗುವುದು, ಕಡಿಮೆ ವೋಲ್ಟೇಜ್ ಸಮಸ್ಯೆ ಕಿರಿಕಿರಿಗೆ ಕಾರಣವಾಗುತ್ತಿದೆ. ಗುಣಮಟ್ಟದಲ್ಲಿ ಸಮರ್ಪಕವಾಗಿ ಪೂರೈಕೆಗೆ ಬೆಸ್ಕಾಂ ಕ್ರಮ ಕೈಗೊಳ್ಳಬೇಕು.

ಭಕ್ತರಹಳ್ಳಿ ಪ್ರತೀಶ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net