

ಮೈಸೂರು: ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಮೊದಲು ಮೀಸಲಾತಿ ಹಾಗೂ ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ದೊರಕಿದೆ. ಚುನಾವಣೆ ನಡೆಸಲು ಸರ್ವಪಕ್ಷ ಸಭೆ ನಡೆಸಲಾಗುವುದು. ಯಾವ ರೀತಿ ವಿಭಾಗಗಳನ್ನು ಮಾಡಬೇಕು ಎಂದು ಅವರ ಬಳಿಯೂ ಸಲಹೆ ಕೇಳಲಾಗುವುದು. ಸದನದಲ್ಲಿ ಈ ಬಗ್ಗೆ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಲಾಗಿತ್ತು. ಅವರ ಶೇ.90 ರಷ್ಟು ಅಭಿಪ್ರಾಯಗಳನ್ನು ಪರಿಗಣಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ ನಡೆಸಲಾಗುವುದು. ಹೊಸ ಪ್ರದೇಶಗಳನ್ನು ಸೇರಿಸಲು ವಿಳಂಬವಾಗುತ್ತದೆ. ಈಗ ಹೇಗಿದೆಯೋ ಅದೇ ರೀತಿ ಮುಂದುವರೆಯಲಾಗುವುದು ಎಂದು ತಿಳಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ‘ಗ್ರೇಟರ್ ಬೆಂಗಳೂರು’ಅನ್ನು ‘ಕ್ವಾರ್ಟರ್ ಬೆಂಗಳೂರು’ ಎಂದು ಲೇವಡಿ ಮಾಡಿದ್ದಾರೆ. ಅವರು ಈ ವಿಧೇಯಕ ಮಂಡನೆಯಾದಾಗಲೇ ವಿರೋಧ ವ್ಯಕ್ತಪಡಿಸಬೇಕಿತ್ತು. ಸದನದಲ್ಲೇಕೆ ಅವರು ಜಾರಿಗೆ ಒಪ್ಪಿಗೆ ಸೂಚಿಸಿದರು? ಅವರು ಕ್ವಾರ್ಟರ್ ಬೆಂಗಳೂರು, ಫುಲ್ ಬೆಂಗಳೂರು ಎಂದು ಏನಾದರು ಹೇಳಲಿ. ಆದರೆ ಅವರು ಏಕೆ ಸದನದಲ್ಲಿ ಸಲಹೆಗಳನ್ನು ನೀಡಿದರು. ವಿರೋಧ ಪಕ್ಷದವರು ಅಷ್ಟೂ ಮಾತನಾಡಲಿಲ್ಲ ಎಂದರೆ ಗೌರವ ಕಡಿಮೆ ಅಲ್ಲವೇ? ಹೀಗಾಗಿ ಅವರು ಮಾತನಾಡುತ್ತಿದ್ದಾರೆ. ಅವರು ಬೆಂಗಳೂರಿನ ಒಂದು ಭಾಗ, ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನಾವು ನೀಡುತ್ತೇವೆ ಎಂದರು.
ರಾಮನಗರ ಹೆಸರು ಬದಲಾವಣೆ ವಿಚಾರದಲ್ಲಿ ತಡವೇನು ಮಾಡುತ್ತಿಲ್ಲ. ಒಳ್ಳೆಯ ಶುಭ ಮುಹೂರ್ತ, ಶುಭ ಘಳಿಗೆಯಲ್ಲಿ ಕಾನೂನಿನ ಅಡಿಯಲ್ಲಿಯೇ ಘೋಷಣೆ ಮಾಡಲಾಗುವುದು. ಶೀಘ್ರದಲ್ಲಿಯೇ ಸಮಯ ತಿಳಿಸುತ್ತೇನೆ ಎಂದರು.
ಪೆಹಲ್ಗಾಮ್ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಪಕ್ಷ, ವ್ಯಕ್ತಿಗಿಂತ ದೇಶ ದೊಡ್ಡದು ಎಂಬುದು ನಮ್ಮ ಒಮ್ಮತದ ತೀರ್ಮಾನ. ಪ್ರಧಾನಿಗಳಿಗೆ ನೀವು ಯಾವ ತೀರ್ಮಾನ ತೆಗೆದುಕೊಂಡರೂ ಬೆಂಬಲ ಸೂಚಿಸುವುದಾಗಿ, ಜತೆಗೆ ಯಾವ ರಾಷ್ಟ್ರಕ್ಕೂ ಮಣಿಯಬಾರದು ಎಂದು ಹೇಳಿದ್ದೆವು. ಆದರೆ, ಇದೀಗ ಬೇರೆ ದೇಶದವರು ನಮ್ಮ ದೇಶದ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಅವರ ಕಾಲದಿಂದಲೂ ನಾವು ಯಾರ ಹಂಗಿಗೂ ಒಳಗಾದವರಲ್ಲ. ಇಂತಹ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಕೇಳುವುದು ನಮ್ಮ ಹಕ್ಕು ಎಂದು ಹೇಳಿದರು.