ಚುನಾವಣೆ ಬ್ಯಾಲೆಟ್ ಮಾದರಿಯಲ್ಲೇ ಇರಲಿ

girish
Published on

ಶಿವಮೊಗ್ಗ: ಈಗಾಗಲೇ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದು ವಿಜೇತರ ಘೋಷಣೆಯೂ ಆಗಿದೆ. ಈ ನಡುವೆ ಫಲಿತಾಂಶದ ಬಗ್ಗೆ ಪರಾಜಿತ ಅಭ್ಯರ್ಥಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಪಿ.ಗಿರೀಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಆಂತರಿಕ ಚುನಾವಣೆ ಪ್ರತಿವರ್ಷ ಬ್ಯಾಲೆಟ್ ಮೂಲಕ ನಡೆಯುತ್ತಿತ್ತು. ಈ ಬಾರಿ ಮಾತ್ರ ಆನ್‌ಲೈನ್ ಮೂಲಕ ನಡೆದಿದೆ. ಈ ಆಂತರಿಕ ಚುನಾವಣೆಯಲ್ಲಿ ಏನೋ ಲೋಪವಾಗಿದೆ ಎನ್ನಿಸುತ್ತದೆ. ನಾನು ಸುಮಾರು 47 ಸಾವಿರ ಸದಸ್ಯತ್ವ ನೋಂದಣಿ ಮಾಡಿಸಿದ್ದೆ. ಆದರೆ ನನಗೆ ಬಂದಿರುವ ಮತಗಳು ತುಂಬ ಕಡಿಮೆ. ಒಟ್ಟಾರೆ ಇದು ಮ್ಯಾಜಿಕ್ ಫಲಿತಾಂಶವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಹುಲ್ ಗಾಂಧಿ ಅವರು ಸಾಮಾನ್ಯರಿಗೂ ಪಕ್ಷದಲ್ಲಿ ಅವಕಾಶ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಆಯ್ಕೆಗಾಗಿ ಆಂತರಿಕ ಚುನಾವಣೆ ಜಾರಿಗೆ ತಂದರು. ಆದರೂ ಈ ಫಲಿತಾಂಶವನ್ನು ಒಪ್ಪಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಚುನಾವಣೆ ಬ್ಯಾಲೆಟ್ ಮಾದರಿಯಲ್ಲೇ ನಡೆಯಲಿ ಎಂದು ಆಗ್ರಹಿಸಿದರು.

ಒಟ್ಟಾರೆ ಎಲ್ಲ ಅಸಮಾಧಾನಗಳನ್ನು ಬದಿಗಿಟ್ಟು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ. ಗೆದ್ದವರು, ಸೋತವರು ಎಲ್ಲ ಸೇರಿಕೊಂಡು ಪಕ್ಷವನ್ನು ಮತ್ತಷ್ಟು ಬೆಳೆಸಬೇಕಿದೆ. ಸಾಮಾನ್ಯ ಯುವಕನಾದ ನನ್ನನ್ನು ಇದುವರೆಗೂ ಪಕ್ಷ ಬೆಳೆಸಿದೆ. ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಪ್ರಾಮಾಣಿಕ, ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ಈಗ ಅದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸೋನಿಯಾ, ಪ್ರಮುಖರಾದ ಬಿ.ಲೋಕೇಶ್, ಮಿಥುನ್, ಅಫ್ತಾಬ್, ಸಂದೀಪ್ ಸುಂದರರಾಜ್, ಮೋಹನ್ ಸೋಮಿನಕೊಪ್ಪ, ರೇಷ್ಮಾ, ಕುಮರೇಶ್, ರಾಹುಲ್, ಪವನ್, ರಾಕೇಶ್, ಸಚಿನ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net