

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿ (ಟಿಎಸ್ಎಸ್) ಆಡಳಿತ ಮಂಡಳಿಗೆ ಸಂಘದ ಆವರಣದಲ್ಲಿ ಭಾನುವಾರ ತುರುಸಿನ ಚುನಾವಣೆ ನಡೆಯಿತು.
ಆಡಳಿತ ಮಂಡಳಿಯ 15 ಸ್ಥಾನಗಳಿಗೆ 32 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಷೇರು ಸದಸ್ಯ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಚಲಾಯಿಸಿದರು. ಒಬ್ಬ ಷೇರು ಸದಸ್ಯನಿಗೆ 15 ಮತ ಚಲಾಯಿಸುವ ಅಧಿಕಾರವಿತ್ತು. 3,485 ಷೇರು ಸದಸ್ಯರಿಗೆ ಮತದಾನ ಹಕ್ಕಿದ್ದು, ಸುಮಾರು 3,142 ಷೇರು ಸದಸ್ಯರು ಮತದಾನ ಮಾಡುವ ಮೂಲಕ 90 ಮತದಾನವಾದಂತಾಗಿದೆ.
ಭಾನುವಾರ ರಾತ್ರಿಯೇ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದ್ದು, ಪ್ರತಿಷ್ಠಿತ ಟಿಎಸ್ಎಸ್ ಸಂಸ್ಥೆಯ ಅಧಿಕಾರ ಯಾವ ಬಣದ ಪಾಲಾಗಲಿದೆ ಎಂದು ಕಾದುನೋಡಬೇಕಿದೆ.
ನಡೆದಿತ್ತು ತೀವ್ರ ಪೈಪೋಟಿ
ಪ್ರತಿಷ್ಠಿತ ಟಿಎಸ್ಎಸ್ ಸೊಸೈಟಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಡವೆ ರಾಮಕೃಷ್ಣ ಹೆಗಡೆ ನೇತೃತ್ವದ ಬಣ ಹಾಗೂ ಮುಂಡಗಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಬಣದ ನಡುವೆ ತೀರಾ ಪೈಪೋಟಿ ನಡೆದಿತ್ತು. ಎರಡೂ ಬಣಗಳ ಅಭ್ಯರ್ಥಿಗಳು ಪ್ರಚಾರ ಕಾರ್ಯ ಜೋರಾಗಿಯೇ ನಡೆಸಿದ್ದರು.