ಹನೂರು ಕೃಷಿ ಪತ್ತಿನ ಸಂಘಕ್ಕೆ ಚುನಾವಣೆ ಇಂದು

12 HANUR 4
ಹನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಚುನಾವಣಾಧಿಕಾರಿ ಎಸ್. ನಾಗೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಬಸವರಾಜು, ಶಿವಲಿಂಗನಾಯ್ಕ ಇತರರು ಇದ್ದರು.
Published on

 ಹನೂರು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಮೇ 14ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ ಸೋಮವಾರ ಸಹಕಾರ ಸಂಘಗಳ ಚುನಾವಣಾಧಿಕಾರಿ ಎಸ್.ನಾಗೇಶ್ ಅವರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ಪರಿಶೀಲಿಸಿದರು.

ಹನೂರು ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದಲ್ಲಿ 25 ವರ್ಷದಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸ್ಥಾನಗಳಿಗೆ ಈವರೆಗೂ ಚುನಾವಣೆ ನಡೆದಿರಲಿಲ್ಲ. ಎಲ್ಲರ ಸಹಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಒಮ್ಮತ ಮೂಡದ ಪರಿಣಾಮ ಚುನಾವಣೆ ನಡೆಯುತ್ತಿದೆ.

ಸಾಲಗಾರರ ಕ್ಷೇತ್ರದಿಂದ 11 ನಿರ್ದೇಶಕ ಸ್ಥಾನಕ್ಕೆ 23 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ ಮಾಜಿ ಶಾಸಕ ಆರ್.ನರೇಂದ್ರ ಹಾಗೂ ಉದ್ದನೂರಿನ ಗಿರೀಶ್ ಅವರು ಕಣದಲ್ಲಿದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ 971 ಮತದಾರರು ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ 274 ಮತದಾರರಿದ್ದಾರೆ. ಚುನಾವಣೆಯು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮೇ 14ರಂದು ಬೆಳಗ್ಗೆ 10ರಿಂದ 3 ಗಂಟೆಯವರೆಗೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಸ್.ನಾಗೇಶ್ ಅವರು ಕಾರ್ಯದರ್ಶಿ ಬಸವರಾಜು ಹಾಗೂ ಇತರರೊಂದಿಗೆ ಆಗಮಿಸಿ ಮೂಲ ಸೌಕರ್ಯ ಹಾಗೂ ಸುಸೂತ್ರ ಚುನಾವಣೆ ಸಂಬಂಧ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net