ಮದ್ದೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ವತಿಯಿಂದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ನೌಕರ ಸಂಘದ ತಾಲೂಕು ಅಧ್ಯಕ್ಷ ಮುದ್ದೇಗೌಡ ತಿಳಿಸಿದ್ದಾರೆ.
ಡಿ. 29ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕಚೇರಿಯ ಆವಣರದಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದ ವೇಳೆ 80 ವರ್ಷ ತುಂಬಿದ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದ್ದು 80 ವರ್ಷ ತುಂಬಿದ ಷೇರುದಾರರು ಡಿ. 20ರ ಬುಧವಾರದೊಳಗೆ ಅಗತ್ಯ ದಾಖಲಾತಿಗಳನ್ನು ಸಂಘದ ಕಚೇರಿಗೆ ತಲುಪಿಸುವಂತೆ ಕೋರಿದ್ದಾರೆ.
ಸಂಘದಲ್ಲಿ 480 ಷೇರುದಾರರಿದ್ದು ಈಗಾಗಲೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಒದಗಿಸಿಕೊಂಡು ಸ್ಥಳೀಯ ಸಾರ್ವಜನಿಕರಿಗೆ ನೇತ್ರ ತಪಾಸಣೆ, ಆರೋಗ್ಯ ಶಿಬಿರ, ಗಿಡ ವಿತರಣೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನೂತನವಾಗಿ ಸಂಘದ ಕಟ್ಟಡವನ್ನು ನಿರ್ಮಾಣ ಮಾಡುವ ಜತೆಗೆ ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರ ಅನುದಾನದಲ್ಲಿ ಮೇಲಂತಸ್ತಿನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸುವುದಾಗಿ ವಿವರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಿ.ಬಸವರಾಜು, ಖಜಾಂಚಿ ಎಂ.ಎನ್.ವೇಣುಗೋಪಾಲಾಚಾರಿ ಹಾಜರಿದ್ದರು.