ರೈಲ್ವೆ ಯೂನಿಯನ್‌ಗಳ ಮಾನ್ಯತೆಗಾಗಿ ಡಿ. 4ರಿಂದ 6ರವರೆಗೆ ಚುನಾವಣೆ

Published on

ಮೈಸೂರು: ದೇಶದಾದ್ಯಂತ ರೈಲ್ವೆ ಯೂನಿಯನ್‌ಗಳ ಮಾನ್ಯತೆಗಾಗಿ ಚುನಾವಣೆ ಘೋಷಣೆ ಆಗಿದ್ದು, ಡಿ. 4ರಿಂದ 6ರವರೆಗೆ ಮತದಾನ ನಡೆಯುತ್ತಿದೆ ಎಂದು ಎಸ್‌ಡಬ್ಲ್ಯುಆರ್‌ಯು ಪ್ರಧಾನ ಕಾರ್ಯದರ್ಶಿ ಎಂ.ಬಿ.ತಾಯದಾಸ್ ತಿಳಿಸಿದರು.

ಇತರ ಯೂನಿಯನ್‌ಗಳು ಕೇಂದ್ರದ ರೈಲ್ವೆ ಇಲಾಖೆ ವಿರೋಧಿ ನೀತಿ ಬೆಂಬಲಿಸುತ್ತಿವೆ. ಇಲ್ಲವೇ ದಲ್ಲಾಳಿಗಳಂತೆ ಕೆಲಸ ಮಾಡುತ್ತಿವೆ. ಹೀಗಾಗಿ ರೈಲ್ವೆ ಸಿಬ್ಬಂದಿಯ ಹಿತ ಕಾಯಲೆಂದು ಎಐಯುಟಿಯುಸಿ ಸಂಯೋಜಿತ ಎಸ್‌ಡಬ್ಲ್ಯುಆರ್‌ಯು ಸಹಾ ನೈಋತ್ಯ ರೈಲ್ವೆ ವಿಭಾಗದಲ್ಲಿ ಸ್ಪರ್ಧಿಸಿದ್ದು, ಅದಕ್ಕೆ ಬೆಂಬಲ ನೀಡಬೇಕೆಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಹಳೇ ಪಿಂಚಣಿ ವ್ಯವಸ್ಥೆಯಾದ ಒಪಿಎಸ್ ಮರಳಿ ಜಾರಿ, ತುರ್ತಾಗಿ ಎಂಟನೇ ಸಿಪಿಸಿ ರಚನೆ, ಗ್ರೂಪ್ ಸಿ ಮತ್ತು ಈ ಹಿಂದೆ ಇದ್ದ ಡಿ ಹುದ್ದೆ ಭರ್ತಿ, ಹಿರಿಯ ನಾಗರಿಕರ ರಿಯಾಯಿತಿ ಮುಂದುವರಿಕೆ, ಕೋವಿಡ್ ಸಮಯದಲ್ಲಿ ತಡೆ ಹಿಡಿಯಲಾದ 18 ತಿಂಗಳ ಡಿಎ, ಡಿಆರ್ ಬಾಕಿ ವೇತನ ಕೂಡಲೇ ಬಿಡುಗಡೆ ಮೊದಲಾದ ಸೌಲಭ್ಯಕ್ಕೆ ತಮ್ಮ ಯೂನಿಯನ್ ಹೋರಾಟ ನಡೆಸಲಿದೆ ಎಂದರು.

ಕೇಂದ್ರ ಸರ್ಕಾರ ರೈಲ್ವೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ನಮ್ಮ ಯೂನಿಯನ್ ವಿರೋಧಿಸಲಿದೆ. ಆದ್ದರಿಂದ ಪ್ರತಿನಿಧಿಯಾಗಿ ರೈಲ್ವೆ ಇಲಾಖೆ ಸಿಬ್ಬಂದಿ ಪರ ಹೋರಾಟ ನಡೆಸಲು ಚುನಾಯಿಸಬೇಕೆಂದು ಕೋರಿದರು.

ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ, ಎನ್.ಎಸ್. ವೀರೇಶ್, ಡಾ.ಪ್ರಮೋದ್, ಪಿ.ಎಸ್. ಸಂಧ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net