ಪ್ರಾಮಾಣಿಕ ಸೇವೆಯಿಂದಲೇ ಚುನಾವಣೆ ಯಶಸ್ವಿ

25 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಚುನಾವಣಾ ಕಾರ್ಯಗಳ ಜವಾಬ್ದಾರಿಯನ್ನು ಎಲ್ಲ ಅಧಿಕಾರಿ, ಸಿಬ್ಬಂದಿ ಪ್ರಾಮಾಣಿಕ, ಪಾರ್ದರ್ಶಕ ಮತ್ತು ನಿಷ್ಠೆಯಿಂದ ಮಾಡಿದಾಗಲೇ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತವೆ. ನಮ್ಮ ದೇಶ ಅಂತಹ ಸಮರ್ಥ ಅಧಿಕಾರಿ, ಸಿಬ್ಬಂದಿ ಹೊಂದಿದ್ದರಿಂದ ಪ್ರತಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದಿಂದ ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸುವ ಅವಕಾಶವನ್ನು ಸಂವಿಧಾನ ನೀಡಿದೆ. ತಪ್ಪದೇ ನಮ್ಮ ಹಕ್ಕನ್ನು ಚಲಾಯಿಸಬೇಕು. ದೇಶದಲ್ಲಿ 99 ಕೋಟಿ ಮತದಾರರಿದ್ದಾರೆ. ವಿಶ್ವದಲ್ಲೇ ಬಲಿಷ್ಠ ಮತ್ತು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆ. ಯುವ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ಆ್ಯಪ್​ ಬಿಡುಗಡೆ ಮಾಡಿದೆ ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಪಿ.ಎಫ್​.ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಾಧಿಕಾರ ನೀಡಿದ ವ್ಯವಸ್ಥೆಗೆ ಪೂರಕವಾಗಿ ಚುನಾವಣಾ ವ್ಯವಸ್ಥೆ ಕೆಲಸ ಮಾಡುತ್ತಿದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲರೂ ಮತದಾನ ಮಾಡಿ ಉತ್ತಮ ವ್ಯಕ್ತಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಭಾರತದಲ್ಲಿ ಚುನಾವಣೆಗಳು ಕಾನೂನು ಬದ್ಧ, ನಿಯಮಾನುಸಾರ ನಡೆಯುತ್ತಿವೆ ಎಂದರು.

ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಕವಿವಿ ಕುಲಸಚಿವ ಎ.ಚನ್ನಪ್ಪ ಮಾತನಾಡಿದರು. ಜಿಲ್ಲಾ ಮಟ್ಟದ ಬಿಎಲ್​ಓ ಮೇಲ್ವಿಚಾರಕರಾಗಿ ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ ಮತ್ತು ಉತ್ತಮ ಬಿಎಲ್​ಓ ಅಂಗನವಾಡಿ ಕಾರ್ಯಕರ್ತೆ ಸವಿತಾ ಶೀಲವಂತರ, ಧಾರವಾಡ 71 ವಿಧಾನಸಭಾ ಮತಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮತಗಟ್ಟೆ ಮೇಲ್ವಿಚಾರಕರಾದ ಆನಂದ ಆನಿಕಿವಿ, ಸಾವಿತ್ರಿ ಡೊಣ್ಣಿ, ಮಂಜುನಾಥ ಬಾಗೇವಾಡಿ, ಉತ್ತಮ ಬಿಎಲ್​ಓಗಳಾದ ಶೃತಿ ಕಡ್ಲಿಮಠ ಮತ್ತು ಗೌರವ್ವ ಚರಂತಿಮಠ ಅವರಿಗೆ ಪ್ರಶಸ್ತಿ ನೀಡಲಾಯಿತು.

ಜಿಪಂ ಉಪ ಕಾರ್ಯದರ್ಶಿ ಬಿ.ಎಸ್​. ಮೂಗನೂರಮಠ, ಜಿಲ್ಲಾ ಚುನಾವಣಾ ರಾಯಭಾರಿ ರಾಕೇಶ ನಿಡಗುಂದಿ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್​ ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ.ಶೇಖ ನಿರೂಪಿಸಿದರು. ತಹಸೀಲ್ದಾರ ಡಾ.ಡಿ.ಎಚ್​.ಹೂಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net