ಸೋತರೂ ಜೆಡಿಎಸ್‌ಗೆ ಹೆಚ್ಚು ಮತ: ಜಿಲ್ಲೆಯಲ್ಲಿ ಸುಧಾರಿಸಿಕೊಂಡ ಕಾಂಗ್ರೆಸ್, ಬಿಜೆಪಿ ಪಕ್ಷದ ಕಡೆಗೂ ಜನರ ಒಲವು

1
Published on

ಮಂಡ್ಯ: ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಣೆಯಾಗಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್, ಒಂದರಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಮತ್ತೊಂದರಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಇದೀಗ ಮತ ಗಳಿಕೆಯ ಚರ್ಚೆ ನಡೆಯುತ್ತಿದ್ದು, ಆರು ಕ್ಷೇತ್ರ ಕಳೆದುಕೊಂಡರೂ ಜೆಡಿಎಸ್ ಮತ ಗಳಿಕೆಯಲ್ಲಿ ಮುಂದಿದೆ.

ಐದು ಸ್ಥಾನಗಳನ್ನು ಕೈವಶಮಾಡಿಕೊಂಡಿರುವ ಕಾಂಗ್ರೆಸ್‌ಗಿಂತಲೂ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಶೇ.36.49ರಷ್ಟು ಮತ ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿಗಳು ಶೇ.37.57ರಷ್ಟು ಮತ ಗಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 15,33,831 ಮತದಾರರಲ್ಲಿ 13,060,63 ಜನರು ಮತದಾನ ಮಾಡಿದ್ದರು. ಇವರಲ್ಲಿ 4,90,785(ಶೇ.37.57) ಜನ ಜೆಡಿಎಸ್ ಪರವಾಗಿ ಮತ ಚಲಾಯಿಸಿದ್ದಾರೆ. 4,76,681(ಶೇ.36.49) ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.

ಏಳು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು 1,79,469(ಶೇ.13.74) ಮತ ಗಳಿಸಿದ್ದರೆ, ಸರ್ವೋದಯ ಕರ್ನಾಟಕ ಪಕ್ಷದ(ಸಕಪ) ಇಬ್ಬರು ಅಭ್ಯರ್ಥಿಗಳು 93,689(ಶೇ.7.17) ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಕಪ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರೊಬ್ಬರೇ 91,151 ಮತಗಳನ್ನು ಗಳಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇನ್ನು ಒಂದು ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿರುವ ಜೆಡಿಎಸ್ ಅದೇಗೆ ಹೆಚ್ಚು ಮತಗಳನ್ನು ಪಡೆದಿದೆ ಎನ್ನುವುದನ್ನು ಗಮನಿಸಿದರೆ ಜಿಲ್ಲೆಯ 7 ಕ್ಷೇತ್ರಗಳ ಪೈಕಿ 6ರಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 5 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಹಿರಂಗ ಬೆಂಬಲ ಘೋಷಿಸಿತ್ತು. ಆದ್ದರಿಂದ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದರೂ ಸಕಪ ಪಡೆದ ಮತಗಳು ಪಕ್ಷದ ಲೆಕ್ಕಕ್ಕೆ ಬರುವುದಿಲ್ಲ. ಇದರಿಂದ ಮತ ಗಳಿಕೆ ಜಿಲ್ಲೆಯಲ್ಲಿ ಒಟ್ಟಾರೆ ವಿಚಾರದಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಪಕ್ಷವೇ ಶೇ.1.8ರಷ್ಟು ಹೆಚ್ಚು ಮತಗಳನ್ನು ಪಡೆದುಕೊಂಡಿದೆ.

ಸುಧಾರಣೆ ಕಂಡ ಕಾಂಗ್ರೆಸ್

2018ರ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಸೋಲುಂಡಿದ್ದ ಕಾಂಗ್ರೆಸ್ ಪಕ್ಷವು ಶೇ.30.20ರಷ್ಟು ಮತಗಳನ್ನು ಗಳಿಸಿತ್ತು. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಾಂಗ್ರೆಸ್ ಅಭ್ಯರ್ಥಿಗಳಿಗಿಂತ 40 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಇದರ ಪರಿಣಾಮ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಶೇ.36.49ರಷ್ಟು ಮತಗಳನ್ನು ಗಳಿಸಿರುವ ಕಾಂಗ್ರೆಸ್, ಕಳೆದ ಬಾರಿಗಿಂತ ಶೇ.6.20ರಷ್ಟು ಹೆಚ್ಚುವರಿ ಮತಗಳನ್ನು ಪಡೆದುಕೊಂಡು 5 ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

2018ರ ಚುನಾವಣೆಯಲ್ಲಿ ಶೇ.55.2ರಷ್ಟು ಮತ ಗಳಿಕೆಯೊಂದಿಗೆ ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲೂ ಜೆಡಿಎಸ್ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಈ ಬಾರಿ ಜೆಡಿಎಸ್ ಪಡೆದಿರುವ ಮತಗಳ ಪ್ರಮಾಣ ಶೇ.37.57ಕ್ಕೆ ಕುಸಿದಿದೆ. ಅಂದರೆ, ಹಿಂದಿನ ಚುನಾವಣೆಗಿಂತ ಶೇ.17.63ರಷ್ಟು ಮತಗಳನ್ನು ಕಳೆದುಕೊಂಡಿದೆ. ಗೆಲುವು ಕಂಡಿರುವ ಏಕೈಕ ಕ್ಷೇತ್ರ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ಅವರು(80646) ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು(58302) ಅವರಿಗಿಂತ 22,344 ಮತಗಳನ್ನು ಹೆಚ್ಚು ಪಡೆದು ಗೆಲುವು ಸಾಧಿಸಿರುವುದರಿಂದ ದಳದ ಮತ ಗಳಿಕೆ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಬಿಜೆಪಿಗೂ ಜನ ಬೆಂಬಲ

ಜಿಲ್ಲೆಯಲ್ಲಿ ಇದ್ದೊಂದು ಕ್ಷೇತ್ರವನ್ನೂ ಕಳೆದುಕೊಂಡಿರುವ ಬಿಜೆಪಿ ಮತ ಗಳಿಕೆ ವಿಚಾರದಲ್ಲಿ 2018ರ ಚುನಾವಣೆಗಿಂತ ಈ ಬಾರಿ ಸುಧಾರಣೆ ಕಂಡಿದೆ. ಹಿಂದಿನ ಚುನಾವಣೆಯಲ್ಲಿ ಶೇ.5.8ರಷ್ಟು ಮತಗಳನ್ನು ಮಾತ್ರ ಬಿಜೆಪಿ ಅಭ್ಯರ್ಥಿಗಳು ಗಳಿಸಿದ್ದರು. ಆದರೆ, ಈ ಬಾರಿ ಅದು ಶೇ.13.74ಕ್ಕೆ ಏರಿಕೆಯಾಗಿದೆ.

ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಷ್ಟೇ ಬಿಜೆಪಿ ಅಭ್ಯರ್ಥಿ ಚಂದಗಾಲು ಶಿವಣ್ಣ ಅವರು 32,062 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಜಿಲ್ಲೆಯ 7 ಕ್ಷೇತ್ರಗಳಲ್ಲಿ ಅವರೊಬ್ಬರೋ ಅಷ್ಟೊಂದು ಮತಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಎಲ್ಲ ಏಳೂ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು. ಪರಿಣಾಮ ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಅಭ್ಯರ್ಥಿ ಎಸ್.ಸಚ್ಚಿದಾನಂದ ಇಂಡುವಾಳು 42,306 ಮತಗಳು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಶೋಕ್ ಜಯರಾಂ 30,661, ಮದ್ದೂರಿನ ಅಭ್ಯರ್ಥಿ ಎಸ್.ಪಿ.ಸ್ವಾಮಿ 28,996 ಮತಗಳನ್ನು ಪಡೆದು ಬಿಜೆಪಿ ಶಕ್ತಿ ತೋರಿಸಿದ್ದಾರೆ. ಆದರೆ, ಕೆ.ಆರ್.ಪೇಟೆ ಕ್ಷೇತ್ರದಲ್ಲಿ 2019ರ ಉಪ ಚುನಾವಣೆಯಲ್ಲಿ 66,094 ಮತಗಳನ್ನು ಪಡೆದು ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಭಾವುಟ ಹಾರಿಸಿದ್ದ ಕೆ.ಸಿ.ನಾರಾಯಣಗೌಡ ಅವರು, ಈ ಬಾರಿಯ ಚುನಾವಣೆಯಲ್ಲಿ ಕೇವಲ 38,151 ಮತಗಳನ್ನು ಪಡೆದು ಸೋಲಿನೊಂದಿಗೆ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ. ನಾಗಮಂಗಲದಲ್ಲಿ ಸುಧಾ ಶಿವರಾಮೇಗೌಡ 7,769, ಮೇಲುಕೋಟೆಯಲ್ಲಿ ಇಂದ್ರೇಶ್ 6,470), ಮಳವಳ್ಳಿಯಲ್ಲಿ ಮುನಿರಾಜು 25116 ಮತ ಪಡೆದುಕೊಂಡಿದ್ದಾರೆ.

2018ರಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 11,326, ಮದ್ದೂರಿನಲ್ಲಿ 4,159, ಮಳವಳ್ಳಿಯಲ್ಲಿ 10,808, ನಾಗಮಂಗಲದಲ್ಲಿ 1915 ಮತ್ತು ಮೇಲುಕೋಟೆಯಲ್ಲಿ 1,595 ಮತಗಳನ್ನು ಬಿಜೆಪಿ ಅಭ್ಯರ್ಥಿಗಳು ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಮತ ಗಳಿಕೆಯಲ್ಲಿ ಸುಧಾರಣೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net