ಹುರುಪು ತಂದ ಚುನಾವಣೆ ಗೆಲುವು

Election victory brought vitality
Published on

ಮಡಿಕೇರಿ:

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳನ್ನು ಕಳೆದುಕೊಂಡು ಕಳೆಗುಂದಿದಂತಿದ್ದ ಬಿಜೆಪಿಗೆ ಯದುವೀರ್ ಗೆಲುವು ಹುರುಪಿನ ಟಾನಿಕ್ ಕೊಟ್ಟಿದೆ. ಆದರೆ ಗೆಲುವಿನ ಅಂತರ ಹಿಂದಿನ ಚುನಾವಣೆಗೆ ಹೋಲಿಸಿದರೆ ಕಡಿಮೆಯಾಗಿದೆ. ಮತ್ತೊಂದು ಕಡೆ ಎರಡು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿದ್ದರೂ ತಮ್ಮ ಅಭ್ಯರ್ಥಿಗೆ ನಿರೀಕ್ಷಿತ ಮತ ಬಾರದಿರುವುದು ಕಾಂಗ್ರೆಸಿಗರನ್ನು ಚಿಂತನೆಗೆ ಹಚ್ಚಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2019ರಲ್ಲಿ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ 1.38 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಪೈಕಿ 85 ಸಾವಿರ ಮತಗಳ ಲೀಡ್ ಕೊಡಗಿನಿಂದಲೇ ಬಂದಿತ್ತು. ಆದರೆ ಈ ಚುನಾವಣೆಯಲ್ಲಿ 1,39,262 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆದ್ದಿದ್ದರೂ ಕೊಡಗಿನಿಂದ ಸಿಕ್ಕಿರುವ ಲೀಡ್ ಪ್ರಮಾಣ 73,559 ಮತಗಳಿಗೆ ಇಳಿದಿದೆ.

2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,02,161 ಮತಗಳನ್ನು ಗಳಿಸಿದ್ದರೆ. ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ 58,185 ಮತಗಳನ್ನು ಗಳಿಸುವ ಮೂಲಕ ಪ್ರತಾಪ್ ಸಿಂಹ 43,976 ಮತಗಳ ಲೀಡ್ ಪಡೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಮಡಿಕೇರಿ ಕ್ಷೇತ್ರದಲ್ಲಿ 1,08,402 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ 66,994 ಮತಗಳಿಸುವ ಮೂಲಕ ಬಿಜೆಪಿಗೆ 41,408 ಮತಗಳ ಲೀಡ್ ಕೊಟ್ಟಿದ್ದಾರೆ.

ಈ ಹಿಂದಿನ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 96,235 ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ 54,738 ಮತಗಳಿಸಿ, ಪ್ರತಾಪ್ ಸಿಂಹ 41,497 ಮತಗಳ ಲೀಡ್ ಪಡೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ 99,804 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಲಕ್ಷ್ಮಣ್ 67,353 ಮತಗಳಿಸಿ, ಬಿಜೆಪಿ ಅಭ್ಯರ್ಥಿಗೆ 32,451 ಮತಗಳ ಮುನ್ನಡೆ ಕೊಟ್ಟಿದ್ದಾರೆ.

2019ರ ಚುನಾವಣೆಗೆ ಹೋಲಿಸಿದರೆ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಮಾರು 11,400 ಮತಗಳನ್ನು ಜಿಲ್ಲೆಯಲ್ಲಿ ಕಳೆದುಕೊಂಡಿರುವುದು ಕಂಡುಬರುತ್ತದೆ. ಒಂದೊಮ್ಮೆ ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಂಡಿದ್ದ ಕೊಡಗಿನಲ್ಲಿ ಪಕ್ಷಕ್ಕೆ ಇದು ದೊಡ್ಡ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಂದು ಕಡೆ ಕೊಡಗಿನಲ್ಲಿ ಮತ್ತೆ ಗತವೈಭವಕ್ಕೆ ಮರಳುವ ಹುರುಪಿನಲ್ಲಿ ಇರುವ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ 84,879 ಮತಗಳನ್ನು ಗಳಿಸಿದ್ದರು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಮಡಿಕೇರಿ ಕ್ಷೇತ್ರದಲ್ಲಿ 66,994 ಮತಗಳನ್ನು ಗಳಿಸಲಷ್ಟೇ ಶಕ್ತವಾಗಿದ್ದಾರೆ. ಇದೇ ವೇಳೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್  80,477 ಮತಗಳನ್ನು ಪಡೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಯದುವೀರ್ 1,08,402 ಮತಗಳನ್ನು ಗಳಿಸಿದ್ದಾರೆ.

ವಿರಾಜಪೇಟೆ ಕ್ಷೇತ್ರದಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ 83,791 ಮತಗಳನ್ನು ಗಳಿಸಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಗೌಡ 67,353 ಮತಗಳನ್ನಷ್ಟೇ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ 79,500 ಮತಗಳನ್ನು ಪಡೆದುಕೊಂಡಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ವಿರಾಜಪೇಟೆ ಕ್ಷೇತ್ರದಿಂದ 99,804 ಮತಗಳನ್ನು ಪಡೆದಿದ್ದಾರೆ.

ಈ ಫಲಿತಾಂಶ ಜಿಲ್ಲೆಯಲ್ಲಿ ಹಲವು ರೀತಿಯ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೇಲೆ ಅತಿಯಾದ ವಿಶ್ವಾಸ ಇಟ್ಟುಕೊಂಡಿತ್ತು. ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ ಗಳಿಕೆಯ ಪ್ರಮಾಣ ಇದನ್ನು ಸುಳ್ಳು ಮಾಡಿದೆ. ಗ್ಯಾರಂಟಿಗಳಿಂದ ಆಚೆಗೂ ಇಲ್ಲಿಯ ಪ್ರಜ್ಞಾವಂತರು ಚಿಂತನೆ ನಡೆಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬರುತ್ತಿದೆ. ಹಾಗೆಯೇ ನರೇಂದ್ರ ಮೋದಿ ನಾಮಬಲವನ್ನೇ ನೆಚ್ಚಿಕೊಂಡಿದ್ದ ಬಿಜೆಪಿಗೂ ಮತದಾರ ಎಚ್ಚರಿಕೆಯ ಸಂದೇಶ ನೀಡಿದ್ದಾನೆ. ಈ ಬೆಳವಣಿಗೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಂತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಬಿಜೆಪಿಯಲ್ಲಿನ ನಾಯಕತ್ವಕ್ಕೆ ಜನ ಬೆಂಬಲ ಕೊಟ್ಟಿದ್ದಾರೆ. ಕೇಂದ್ರದಲ್ಲಿ ನಾವೇ ಸರ್ಕಾರ ಮಾಡುತ್ತೇವೆ. ಅಭಿವೃದ್ಧಿ ಕೆಲಸ ಮುಂದುವರಿಸಿಕೊAಡು ಹೋಗಲಾಗುವುದು. ನಮ್ಮ ಕ್ಷೇತ್ರಕ್ಕೆ ಉತ್ತಮ ಸಂಸದ ಆಯ್ಕೆ ಆಗಿದ್ದಾರೆ. ಇವರು ಜನಸಾಮಾನ್ಯರ ಕೈಗೂ ಸಿಗುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಎಂಎಲ್‌ಸಿ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಈ ಎರಡು ಗೆಲುವುಗಳು ನಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ಮೂಡಿಸಲಿದೆ. ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಪಕ್ಷ ಸಂಘಟಿಸುತ್ತೇವೆ.
ನಾಪಂಡ ರವಿ ಕಾಳಪ್ಪ, ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ

ಮತದಾರ ನೀಡಿದ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಸೋಲು ನಾನೂ ಸೇರಿದಂತೆ ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಚುನಾವಣೆಯಲ್ಲಿ ಸೋಲು ಗೆಲವು ಸಹಜ. ಇದನ್ನು ಸವಾಲಾಗಿ ಸ್ವೀಕರಿಸಲಾಗುವುದು.  ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಶಕ್ತಿ ಮೀರಿ  ದುಡಿದಿದ್ದಾರೆ. ಮುಂದೆ ಬರುವ    ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಘಟನಾತ್ಮಕವಾಗಿ ತಯಾರಾಗುತ್ತೇವೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net