ಚುನಾವಣೆ: ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮ

MDK11
Published on

ಮಡಿಕೇರಿ: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ವಾರಾಂತ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಜಾಥ, ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚುನಾವಣೆ ಘೋಷಣೆಯಾಗಿ ಮೇ.೧೦ ರಂದು ಮತದಾನ ನಡೆಯಲಿದ್ದು, ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮತದಾನ ಹೆಚ್ಚಳಕ್ಕೆ ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ತಿಳಿಸಿದರು.


ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ.೭೪ ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.೮೦ ಕ್ಕಿಂತ ಹೆಚ್ಚು ಮತದಾನ ಆಗಲು ಹೆಚ್ಚಿನ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಮತದಾನದ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ಜೊತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮನವಿ ಮಾಡಿದರು.


ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮತದಾನ ಹೆಚ್ಚಳ ಸಂಬಂಧಿಸಿದಂತೆ ಜಾಗೃತಿ ಮೂಡಿಸುವಲ್ಲಿ ಸಂತೆ ನಡೆಯುವ ದಿನಗಳಂದು ಕರಪತ್ರ ಹಂಚುವ ಮೂಲಕ ಹಾಗೂ ಪ್ರವಾಸಿ ಸ್ಥಳಗಳಲ್ಲಿಯೂ ಹೆಚ್ಚಿನ ಅರಿವು ಮೂಡಿಸಬಹುದು ಎಂದು ಸಲಹೆ ಮಾಡಿದರು.


ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಬೈಕ್ ರ‌್ಯಾಲಿ, ಸೈಕಲ್ ಜಾಥ, ಚಿತ್ರಕಲಾ ಶಿಬಿರ, ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ ಸ್ಟ್ಯಾಂಡಿಸ್ ಅಳವಡಿಸುವುದು ಹಾಗೂ ಸಾಮಾಜಿಕ ಜಾಲತಾಣ ಮೂಲಕ ಹೆಚ್ಚಿನ ಪ್ರಚಾರ ಮಾಡಬಹುದು ಎಂದರು.


ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಮತದಾನ ಕಡಿಮೆಯಾಗಿರುವ ಮತಗಟ್ಟೆಗಳಲ್ಲಿ ಕಿರುನಾಟಕ ಪ್ರದರ್ಶನ ಮೂಲಕ ಹೆಚ್ಚಿನ ಅರಿವು ಮೂಡಿಸಬಹುದಾಗಿದೆ ಎಂದರು.


ರೋಟರಿ ಸಂಸ್ಥೆಯ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಬೈಲ್ ಟಾರ್ಚ್ ಮೂಲಕ ಜಾಗೃತಿ. ಹಾಗೆಯೇ ರಾಜಸೀಟಿನಲ್ಲಿ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಬಹುದಾಗಿದೆ ಎಂದು ಸಲಹೆ ಮಾಡಿದರು.


ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಧನಂಜಯ ಮಾತನಾಡಿ, ಬೈಕ್ ರ‌್ಯಾಲಿ ಏರ್ಪಡಿಸಲಾಗುವುದು. ೧೮ ರಿಂದ ೩೦ ವರ್ಷದವರೆಗಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಪ್ರದೇಶಗಳಿದ್ದು, ಅವರನ್ನು ಆಹ್ವಾನಿಸಿ ಮತದಾನ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದು ಸಲಹೆ ಮಾಡಿದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ ಅಸೋಷಿಯೇಷನ್ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಮತದಾನದಂದು ಕೊಠಡಿ ಕಾಯ್ದಿರಿಸುವ ರಾಜ್ಯದ ಪ್ರವಾಸಿಗರು ಮತದಾನ ಮಾಡಿ ಬಂದಲ್ಲಿ ಶೇ.೧೦ ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿ.ಪಂ.ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಏ.೧೫ ರಂದು ರಾಜಸೀಟಿನಲ್ಲಿ ಚಿತ್ರಕಲಾ ಶಿಬಿರ, ಏ.೧೬ ರಂದು ಬೈಕ್ ರ‌್ಯಾಲಿ, ಏಪ್ರಿಲ್, ಏ.೩೦ ರಂದು ಟಾರ್ಚ್ ಡೇ ಆಯೋಜಿಸುವ ಬಗ್ಗೆ ಸಂಬಂಧಪಟ್ಟವರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೋರಿದರು.


ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷ ರೆಹನಾ ಸುಲ್ತಾನ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಬೆಕಲ್ ನವೀನ್, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net