ಸಮಯಕ್ಕೆ ಮುನ್ನ ನಾಮಪತ್ರ ಸಲ್ಲಿಕೆ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

30112020 Koppal GP Election
Published on

ಬಂಟ್ವಾಳ: ತುಂಬೆ ಗ್ರಾಮ ಪಂಚಾಯಿತಿ ಒಂದನೇ ವಾರ್ಡ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದ ಕಾರಣ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶುಕ್ರವಾರ ಮಧ್ಯಾಹ್ನದವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರು ಅಂತಿಮವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಎಸ್ಟಿಗೆ ಮೀಸಲಾಗಿದ್ದ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಆಗದಿದ್ದರೆ ಆ ಸ್ಥಾನವನ್ನು ಎಸ್ಸಿ ಮೀಸಲಾತಿಗೆ ಮಾರ್ಪಡಿಸುವ ಅಧಿಕಾರ ಚುನಾವಣಾ ಅಧಿಕಾರಿಗೆ ಇದೆ. ಅದರಂತೆ ತುಂಬೆಯಲ್ಲಿ ಎಸ್ಟಿಗೆ ಮೀಸಲಾಗಿದ್ದ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಆಗದ ಹಿನ್ನೆಲೆಯಲ್ಲಿ ಎಸ್ಸಿಗೆ ಸೇರಿದ ವ್ಯಕ್ತಿಯೊಬ್ಬರು(ಬಿಜೆಪಿ ಬೆಂಬಲಿತ) ನಾಮಪತ್ರ ಸಲ್ಲಿಸಿದ್ದಾರೆ.

ನಿಯಮದಂತೆ ನಾಮಪತ್ರ ಅಪರಾಹ್ನ 3 ಗಂಟೆಯ ಬಳಿಕ ಸಲ್ಲಿಸಬೇಕು. ಆದರೆ ಎಸ್ಟಿ ಬದಲಿಗೆ ನಾಮಪತ್ರ ಸಲ್ಲಿಸಿರುವ ಎಸ್ಸಿ ವ್ಯಕ್ತಿ ಮಧ್ಯಾಹ್ನ 2.40ಕ್ಕೆ ಸಲ್ಲಿಸಿದ್ದಾರೆ. ನಾಮಪತ್ರದಲ್ಲೂ ಆ ಸಮಯ ದಾಖಲಾಗಿದೆ ಎನ್ನಲಾಗಿದೆ. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರೊಬ್ಬರು ಗ್ರಾಮ ಪಂಚಾಯಿತಿಗೆ ದೌಡಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರು ಜಮಾಯಿಸಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ತಹಸೀಲ್ದಾರ್, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net