

ಮಂಡ್ಯ: ಚುನಾವಣಾ ಕೆಲಸಗಳು ಒತ್ತಾಯ ಪೂರ್ವಕವಾಗಿರಬಾರದು. ಬದಲಿಗೆ ಜವಾಬ್ದಾರಿಯುತವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಸೆಕ್ಟರ್ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಚುನಾವಣೆ ಕೆಲಸಗಳನ್ನು ನೈತಿಕ ಭಯದೊಂದಿಗೆ, ಪಾರದರ್ಶಕವಾಗಿ, ಚುನಾವಣಾ ಆಯೋಗ ನಿಗದಿಪಡಿಸಿರುವ ನಿಯಮಗಳ ಅನುಸಾರ ನಿರ್ವಹಿಸಬೇಕು. ಇಲ್ಲಿ ಯಾವುದೇ ಸ್ವಯಂ ನಿರ್ಧಾರಕ್ಕೆ ಅವಕಾಶವಿಲ್ಲ. ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗೆ ಮೊದಲ ಆದ್ಯತೆ ಚುನಾವಣಾ ಕೆಲಸವಾಗಬೇಕು ಎಂದರು.
ಸೆಕ್ಟರ್ ಅಧಿಕಾರಿಗಳು ಮೊದಲು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆ ಪರಿಶೀಲಿಸಬೇಕು. ರ‌್ಯಾಂಪ್, ಕುಡಿಯುವ ನೀರು, ಶೌಚಗೃಹ, ಬಾಗಿಲು, ಕಿಟಕಿ, ವಿದ್ಯುತ್ ವ್ಯವಸ್ಥೆ, ವಿದ್ಯುತ್ ದೀಪ, ಕೊಠಡಿಗಳಿಗೆ ಒಳಗೆ, ಹೊರ ಹೋಗಲು ಮತದಾರರಿಗೆ ಸರಿಯಾದ ವ್ಯವಸ್ಥೆ ಸೇರಿದಂತೆ ಮುಂತಾದ ಮೂಲ ವ್ಯವಸ್ಥೆಗಳು ಇರುವ ಬಗ್ಗೆ ತಹಸೀೀಲ್ದಾರ್‌ಗೆ ವರದಿ ನೀಡಬೇಕು. ಯಾವುದೇ ವ್ಯವಸ್ಥೆ ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಚುನಾವಣಾ ದಿನಾಂಕ ಪ್ರಕಟವಾದ ತಕ್ಷಣ ಜನಪ್ರತಿನಿಧಿಗಳ ಭಾವಚಿತ್ರವಿರುವ ್ಲೆಕ್ಸ್‌ಗಳನ್ನು ತೆರವುಗೊಳಿಸಿ. ಖಾಸಗಿ ವಾಹನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಬಾವುಟ, ಬ್ಯಾನರ್‌ಗಳನ್ನು ಹಾಕಿಕೊಳ್ಳಲು ಅನುಮತಿ ಅವಶ್ಯಕ. ಒಂದು ವೇಳೆ ನಿಯಮ ಉಲ್ಲಂಸಿದರೆ ವಾಹನವನ್ನು ವಶಕ್ಕೆ ಪಡೆಯಬೇಕು. ಸರ್ಕಾರದ ಅನುದಾನ ಬಳಸಿ ಯಾವುದೇ ಜಾಹೀರಾತು ನೀಡಲು ಅವಕಾಶ ಇಲ್ಲ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಸೆಕ್ಟರ್ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾಗ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಳೆದ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ನಗರಸಭೆ, ಪುರಸಭೆ, ನಗರ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ನಡೆದ ಘಟನೆ, ದೂರು ಹಾಗೂ ಸನ್ನಿವೇಶಗಳನ್ನು ತಿಳಿದು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಎಎಸ್ಪಿ ತಿಮ್ಮಯ್ಯ, ಮುಡಾ ಆಯುಕ್ತ ಲೋಕನಾಥ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್‌ಕುಮಾರ್ ಇತರರಿದ್ದರು.