ಮನೆಯಿಂದಲೇ ನಡೆಯುವ ಮತದಾನ ಗೌಪ್ಯವಾಗಿರಲಿ: ನಿರ್ಲಕ್ಷ್ಯ ವಹಿಸಿದರೆ ಆರ್‌ಪಿ ಆಕ್ಟ್ 128 ರಡಿ ಕ್ರಿಮಿನಲ್ ಕೇಸ್ ದಾಖಲು

Election training for PROs and APROs mandya
Published on

ಮಂಡ್ಯ: ಮನೆಯಿಂದಲೇ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿರುವ 85 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಏ.16, 17 ಹಾಗೂ 18 ರಂದು ಮತದಾನ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ಭಾಗವಹಿಸುವ ಪಿಆರ್‌ಒ ಮತ್ತು ಎಪಿಆರ್‌ಒ ಮತದಾನದ ಗೌಪ್ಯತೆಯನ್ನು ಕಾಪಾಡುವುದು ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಮನೆಯಿಂದ ಅಂಚೆ ಮತದಾನ ಕುರಿತು ಪಿಆರ್‌ಒ ಮತ್ತು ಎಪಿಆರ್‌ಒಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮತದಾನ ಗೌಪ್ಯತೆ ಕಾಪಾಡದಿದ್ದರೆ ಆರ್‌ಪಿ ಆಕ್ಟ್ 128 ರಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಂಚೆ ಮತದಾನ ಕುರಿತಂತೆ ತರಬೇತಿ ಹಾಗೂ ಅನುಸರಿರಬೇಕಾದ ಕ್ರಮಗಳ ಬಗ್ಗೆ ಮಾಹಿತಿಯುತ ಪುಸ್ತಕ ನೀಡಲಾಗಿದೆ. ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ಎಚ್ಚರಿಕೆ ನೀಡಿದರು.

ಅಂಚೆ ಮತದಾನ ಮಾಡುವ ಸಂದರ್ಭದಲ್ಲಿ ಮತಪತ್ರಗಳು ಅಧಿಕಾರಿ ಅಥವಾ ಸಿಬ್ಬಂದಿ ತಪ್ಪಿನಿಂದ ತಿರಸ್ಕಾರವಾಗಬಾರದು. ಅದು ಕಂಡುಬಂದಲ್ಲಿ ಶಿಸ್ತು ಕ್ರಮವಹಿಸಲಾಗುವುದು. ಮತದಾನಕ್ಕೆ ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ವಯ ನಿಗದಿತ ಕಾಲಾವಧಿಯಲ್ಲಿ ಯಾವುದೇ ಲೋಪಕ್ಕೆ ಅವಕಾಶ ಕೊಡದೆ ಚುನಾವಣಾ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇದಕ್ಕೆ ಸಹಕಾರಿಯಾಗುವಂತೆ ತರಬೇತಿ ಆಯೋಜಿಸಲಾಗಿದೆ. ತರಬೇತಿಯಲ್ಲಿ ಯಾವುದೇ ಗೊಂದಲಗಳಿದ್ದರೂ ಪರಿಹರಿಸಿಕೊಳ್ಳಬಹುದು. ಕೂಲಂಕಷವಾಗಿ ತರಬೇತುದಾರರು ನೀಡುವ ಮಾಹಿತಿಗಳನ್ನು ಸರಿಯಾಗಿ ಗ್ರಹಿಸಿ ಅದರಂತೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಅಂಚೆ ಮತದಾನದ ಸಂದರ್ಭದಲ್ಲಿ ಯಾವುದೇ ಭಯದ ವಾತಾವರಣವಿರುವುದಿಲ್ಲ. ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ. ಮತಪತ್ರವನ್ನು ಜಾಗರೂಕತೆಯಿಂದ ತಿಳಿಸಿರುವ ರೀತಿ ಮಡಿಕೆ ಮಾಡಿ ಮತದಾರರಿಗೆ ನೀಡಿ ಅವರು ಮತದಾನದ ನಂತರ ಅದೇ ರೀತಿ ಫೋಲ್ಡ್ ಹಾಗೂ ಕವರ್ ಮಾಡಲಿ. ಮತದಾನದ ಸಂದರ್ಭದಲ್ಲಿ ಮನೆಯಲ್ಲಿರುವ ಇತರರು ಮತದಾನವನ್ನು ನೋಡಲು ಪ್ರಯತ್ನಿಸುತ್ತಾರೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಾಗಿದ್ದು, ಅವರಿಗೆ ಬೇಕಿರುವ ಎಲ್ಲ ಮಾಹಿತಿಯನ್ನು ನೀಡಿ ಮತದಾನದ ಸಂದರ್ಭದಲ್ಲಿ ಅವರನ್ನು ಹೊರತು ಪಡಿಸಿ ಎಲ್ಲರೂ ದೂರ ಇರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net