

ಚಿಕ್ಕಬಳ್ಳಾಪುರ: ಜಿಪಂ, ತಾಪಂ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಮತ್ತೆ ಬದಲಾವಣೆಯಾಗಿದ್ದು, ಜಿಲ್ಲಾಡಳಿತದ ವತಿಯಿಂದ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರಸ್ತುತ ಹೊಸ ವರದಿಯ ಪ್ರಕಾರ 106 ತಾಪಂ ಕ್ಷೇತ್ರಗಳು ಮತ್ತು 29 ಜಿಪಂ ಕ್ಷೇತ್ರಗಳನ್ನು ವಿಂಗಡಿಸಿರುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೂ ಮೊದಲು ಜಿಲ್ಲೆಯಲ್ಲಿ 108 ತಾಪಂ ಮತ್ತು 28 ಜಿಪಂ ಕ್ಷೇತ್ರಗಳಿದ್ದವು. ಇತ್ತೀಚೆಗಿನ ಮೊದಲ ಮರು ವಿಂಗಡಣೆ ಸಂದರ್ಭದಲ್ಲಿ 88 ತಾಪಂ ಮತ್ತು 31 ಜಿಪಂ ಕ್ಷೇತ್ರಗಳನ್ನು ಗುರುತಿಸಲಾಗಿತ್ತು. ಆದರೆ, ಎರಡನೇ ಮರು ವಿಂಗಡಣೆ ಸಂದರ್ಭದಲ್ಲಿ ಮತ್ತೆ ಬದಲಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಷ್ಟೊತ್ತಿಗಾಗಲೇ ತಾಪಂ ಮತ್ತು ಜಿಪಂ ಚುನಾವಣೆ ಮುಗಿದು, ಸ್ಥಳೀಯ ಜನಪ್ರತಿನಿಧಿಗಳ ಆಯ್ಕೆಯಾಗಬೇಕಾಗಿತ್ತು. ಆದರೆ, ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸುವ ವಿಚಾರದಲ್ಲಿ ವಿವಾದ, ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಸೇರಿ ನಾನಾ ಕಾರಣಗಳಿಂದ ವಿಳಂಬವಾಗಿದೆ. ಕಳೆದ ಅನೇಕ ತಿಂಗಳಿಂದಲೂ ಆಡಳಿತ ಸಂಸ್ಥೆಗಳು, ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ದರ್ಬಾರಿನಲ್ಲಿ ನಡೆಯುತ್ತಿದೆ. ಇದರ ನಡುವೆ ನ್ಯಾಯಾಲಯವು ತ್ವರಿತವಾಗಿ ಚುನಾವಣಾ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮರು ವಿಂಗಡಣೆ ಮತ್ತು ಆಯಾ ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿಸಲಾಗಿತ್ತು. ಆದರೆ, ಸರ್ಕಾರವು ಕ್ಷೇತ್ರಗಳ ಮರು ವಿಂಗಡನೆಗೆ ಮತ್ತೆ ಪ್ರತ್ಯೇಕ ಕಾಯ್ದೆ ಜಾರಿಗೊಳಿಸಿ, ಹೊಸದಾಗಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಿದೆ. ಅದರಂತೆ ಜಿಲ್ಲಾಡಳಿತವು ಇತ್ತೀಚೆಗೆ ಹೊಸ ಪ್ರಸ್ತಾವನೆ ಸಲ್ಲಿಸಿದೆ.
ಹೊಸದಾಗಿ ಜಿಲ್ಲೆಯಲ್ಲಿ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕ್ಷೇತ್ರಗಳ ವಿಂಗಡನೆಯಲ್ಲಿ ಬದಲಾವಣೆಗಳಾಗಿವೆ. ತಲಾ 40 ಸಾವಿರ ಜನಸಂಖ್ಯೆಗೆ 1 ಜಿಪಂ ಮತ್ತು ತಲಾ 10ರಿಂದ 15 ಸಾವಿರ ಜನಸಂಖ್ಯೆ ಹೊಂದಿರುವ ವ್ಯಾಪ್ತಿಯನ್ನು 1 ತಾಪಂ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.
9.50 ಲಕ್ಷ ಜನಸಂಖ್ಯೆ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 9.50 ಲಕ್ಷ ಜನಸಂಖ್ಯೆ ಇದೆ. ಇದಕ್ಕೆ ಅನುಗುಣವಾಗಿ ಮತ್ತು ಚುನಾವಣಾ ಆಯೋಗದ ಮಾನದಂಡಗಳನ್ನು ಆಧರಿಸಿ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಎರಡನೇ ಬಾರಿ ಪ್ರಕ್ರಿಯೆ ಕೈಗೊಂಡಿರುವುದರಿಂದ ಆಯಾ ಕ್ಷೇತ್ರಗಳ ಹಳೇ ಮೀಸಲಾತಿಯು ಸಹ ಬದಲಾವಣೆಯಾಗುವ ನಿರೀಕ್ಷೆ ಮೂಡಿದೆ.
ಚುನಾವಣೆಯತ್ತ ಆಕಾಂಕ್ಷಿಗಳ ದೃಷ್ಟಿ: 2020 ಮೇನಲ್ಲಿ ಜಿಪಂ ಮತ್ತು ತಾಪಂ ಅಧಿಕಾರ ಅವಧಿ ಮುಗಿದಿದೆ. ಎರಡು ವರ್ಷಗಳಿಂದಲೂ ಜನಪ್ರತಿನಿಧಿಗಳ ಆಯ್ಕೆಯಾಗಿಲ್ಲ. ಇದರ ನಡುವೆ ಆಯಾ ವ್ಯಾಪ್ತಿಯಲ್ಲಿ ಆಕಾಂಕ್ಷಿಗಳು ಚುನಾವಣೆಗೆ ಎದುರು ನೋಡುತ್ತಿದ್ದಾರೆ. ಸ್ಥಳೀಯ ಆಡಳಿತ ಸಂಸ್ಥೆಗಳ ಅವಧಿ ಮುಕ್ತಾಯಗೊಳ್ಳುವ ಮೂರ್ನಾಲ್ಕು ತಿಂಗಳು ಮೊದಲೇ ಕ್ಷೇತ್ರಗಳಲ್ಲಿ ಪ್ರಭಾವ ಬೆಳೆಸಿಕೊಳ್ಳಲು ಅನೇಕರು ಕಸರತ್ತು ನಡೆಸಿದ್ದರು. ಅಧಿಸೂಚನೆ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷದ ಟಿಕೆಟ್ ಪಡೆದುಕೊಂಡು ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದರು. ಆದರೆ, ಇದಕ್ಕೆ ಇಲ್ಲಿಯವರೆಗೂ ಚುನಾವಣೆ ನಡೆದಿಲ್ಲ.
ಕಳೆದ 2021ನೇ ಸಾಲಿನ ಸೆಪ್ಟೆಂಬರ್‌ನಲ್ಲಿ ಕ್ಷೇತ್ರಗಳ ವಿಂಗಡನೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಆಯಾ ವ್ಯಾಪ್ತಿಯಲ್ಲಿ ಆರ್ಥಿಕ ನೆರವು, ವಿಶೇಷ ಕಾರ್ಯಕ್ರಮಗಳ ಮೂಲಕ ಜನರ ಒಲವು ಗಳಿಸಲು ನಾನಾ ಕಸರತ್ತುಗಳನ್ನು ನಡೆಸಲಾಯಿತು. ಇದಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡುವಿಕೆಗೆ ತಣ್ಣೀರೆರಚಿತು. ಮತ್ತೆ ಹಲವು ತಿಂಗಳ ಬಳಿಕ ಪ್ರಕರಣದ ಇತ್ಯರ್ಥದಿಂದ ಆಸೆ ಚಿಗುರೊಡೆದಿದ್ದು ಸ್ಪರ್ಧೆಗೆ ಆಕಾಂಕ್ಷಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಜಿಪಂ ಮತ್ತು ತಾಪಂ ಕ್ಷೇತ್ರದ ಚುನಾವಣೆಯು ನಾನಾ ಪ್ರಕ್ರಿಯೆಯ ಕಾರಣಗಳಿಂದ ಮುಂದೂಡಿಕೆಯಾಗುತ್ತದೆ. ಇದು ಮುಗಿದು ತ್ವರಿತವಾಗಿ ಜನಪ್ರತಿನಿಧಿಗಳ ಆಯ್ಕೆಯಾಗಬೇಕಿದೆ.ಮಧು, ಚುನಾವಣಾ ಆಕಾಂಕ್ಷಿ