

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಸಹಕಾರಿ ಸಂಸ್ಥೆ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್) ಆಡಳಿತ ಮಂಡಳಿ 17 ಮಂದಿ ನಿರ್ದೇಶಕರ ಸ್ಥಾನಕ್ಕೆ ಆ. 20ರಂದು ಸಂಸ್ಥೆಯ ಆವರಣದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಮಂಡಳಿ ಬದಲಾವಣೆ ಕಾರ್ಯ ಮಾಡುವುದು ನಿಯಮಗಳಲ್ಲಿ ಒಂದು. ಹಾಗಾಗಿ ಈಗಿರುವ ಆಡಳಿತ ಮಂಡಳಿಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 17 ಸ್ಥಾನಗಳಿಗೆ 34 ಮಂದಿ ಚುನಾವಣಾ ಕಣದಲ್ಲಿ ಉಳಿದಂತಾಗಿದೆ. ಕಳೆದ ಅವಧಿಗೆ ಎಲ್ಲ ನಿರ್ದೇಶಕರ ಅವಿರೋಧ ಆಯ್ಕೆ ಆಗಿತ್ತು. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿದ ಸಂಖ್ಯೆಯ ಆಕಾಂಕ್ಷಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ‘ಅ’ ವರ್ಗದಿಂದ 8, ‘ಬ’ ವರ್ಗ ದಿಂದ 16, ಮಹಿಳಾ ಮೀಸಲು ಕ್ಷೇತ್ರದಿಂದ 4, ಹಿಂದುಳಿದ ‘ಅ’ ವರ್ಗದಿಂದ 2, ಹಾಗೂ ಹಿಂದುಳಿದ ‘ಬ’ ವರ್ಗದಿಂದ ಇಬ್ಬರು ಅಭ್ಯರ್ಥಿಗಳು ಸೇರಿ ಒಟ್ಟು 34 ಜನ ಚುನಾವಣಾ ಅಖಾಡದಲ್ಲಿದ್ದಾರೆ.