ಚುನಾವಣಾ‌‌ ಮಾದರಿಯಲ್ಲಿ ಶಾಲಾ ಕಲ್ಪಿತ ಸಂಸತ್ ಚುನಾವಣೆ

IMG-20230708-WA0009.jpg
Published on

ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಚುನಾವಣೆ ಮಾದರಿಯಲ್ಲಿ ಶನಿವಾರ ಶಾಲಾ ಕಲ್ಪಿತ ಸಂಸತ್ ಚುನಾವಣೆ ಜರುಗಿತು.
 ನಾಮಪತ್ರ ಸಲ್ಲಿಕೆ, ಚಿಹ್ನೆ ನೀಡುವಿಕೆ, ಚುನಾವಣಾ ಪ್ರಚಾರ, ಸಿಬ್ಬಂದಿ ನೇಮಕ , ಏಜೆಂಟರ ನೇಮಕ, ಇವಿಎಂ ಮಾದರಿಯಲ್ಲಿ ಆ್ಯಪ್ ಬಳಸುವ ಮೂಲಕ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಶಾಲೆಯ ಸುಮಾರು 180ಕ್ಕೂ ಹೆಚ್ಚು ಮಕ್ಕಳು ಮತದಾನ ಮಾಡಿ ತಮ್ಮ ನಾಯಕನನ್ನು ಆರಿಸಿದರು. ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಮುಖ್ಯ ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ ಮಾತನಾಡಿ, ಭಾರತದ ಭಾವಿ ಮತದಾರ ಆಗಲಿರುವ ಪ್ರೌಢಶಾಲಾ ಮಕ್ಕಳು ನಮ್ಮ ಚುನಾವಣಾ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಸುವುದಕ್ಕೆ ಚುನಾವಣಾ ಮಾದರಿ ಅನುಸರಿಸಲಾಗಿದೆ. ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವುದರಲ್ಲಿ ಮತದಾರರ ಜವಾಬ್ದಾರಿ ಬಗ್ಗೆ ಮಕ್ಕಳಲ್ಲಿ ಅರಿವು, ಚುನಾವಣೆಯಲ್ಲಿ ಆಸಕ್ತಿ ಮತ್ತು ನಾಯಕತ್ವದ ಗುಣ ಬೆಳೆಸುವ ಭಾಗವಾಗಿ ಪ್ರಕ್ರಿಯೆ ನಡೆಸಲಾಗಿದೆ. ಮಕ್ಕಳು ಪ್ರಜಾಪ್ರಭುತ್ವದ ಆಶಯ ತಿಳಿದುಕೊಳ್ಳಬೇಕು ಎಂದು ಹೇಳಿದರು.
 ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎನ್. ಮಡಿವಾಳರ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಕೃಷ್ಣ ಕುರುಬರ ಕೂಡ ಮತ ಚಲಾಯಿಸಿ, ವಿದ್ಯಾರ್ಥಿಗಳನ್ನು ಹುರುದುಂಬಿಸಿದರು. ಶಿಕ್ಷಕರಾದ ಮಹೇಶ ಅಕ್ಕಿ, ಶಿವಾನಂದ ತಲ್ಲೂರ, ಗೀತಾ ಖಾನಟ್ಟಿ, ಲಲಿತಾ ದುಂಡಿ, ಶಶಿಕಲಾ ಗರಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net