ಗೆಲುವಿನ ಲೆಕ್ಕಾಚಾರ ಜೋರು

grama panchayath
Published on

ಚಿಕ್ಕಮಗಳೂರು: ಒಂದು ತಿಂಗಳಿಂದ ಚುನಾವಣಾ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬುಧವಾರ ಸ್ವಲ್ಪ ನಿರಾಳರಾಗಿದ್ದು, ಡಿ.30ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಎಲ್ಲರೂ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ಜಮೀನು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೈಮರ, ದಾಸರಹಳ್ಳಿ, ಮಲ್ಲೇನಹಳ್ಳಿ, ತೊಗರಿಹಂಕಲ್, ಹೊಸಪೇಟೆ, ಹಿರೇಕೊಳಲೆ, ಜೋಳ್​ದಾಳ್, ವಸ್ತಾರೆ ಸೇರಿದಂತೆ ಮಲೆನಾಡಿನ ಕೆಲವು ಭಾಗಗಳ ಸ್ಪರ್ಧಿಗಳು, ಬೆಂಬಲಿಗರು ಕಾಫಿ, ಅಡಕೆ ತೋಟದ ಕೆಲಸದಲ್ಲಿ, ಕೆಲವರು ಭತ್ತದ ಒಕ್ಕಲಾಟಕ್ಕೂ ಸಿದ್ಧತೆ ಮಾಡುತ್ತಿದ್ದಾರೆ.

ಮರ್ಲೆ, ಹೊಸಕೋಟೆ ರಾಮನಹಳ್ಳಿ, ಲಕ್ಯಾ, ಗಾಣದಾಳು, ಕಣಿವೆಹಳ್ಳಿ, ಕ್ಯಾತನಬೀಡು, ಹಿರೇಗೌಜ, ದೇವರಹಳ್ಳಿ, ಚಿಕ್ಕಗೌಜ, ಉದ್ದೇಬೋರನಹಳ್ಳಿ, ಬಿಳೇಕಲ್ಲಳ್ಳಿ, ಸಖರಾಯಪಟ್ಟಣ ಸೇರಿದಂತೆ ಬಯಲು ಭಾಗದಲ್ಲಿ ತೆಂಗು, ಜೋಳ, ಟೊಮ್ಯಾಟೊ, ಮೆಣಸಿಕಾಯಿ, ಕೋಸು, ಶುಂಠಿ, ತರಕಾರಿ ಬೆಳೆದಿರುವ ಹೊಲಗದ್ದೆಗಳಲ್ಲಿ ಸ್ಪರ್ಧಿಗಳು ಕಳೆ ಕೀಳುತ್ತಿದ್ದ ದೃಶ್ಯ ಕಂಡು ಬಂದಿತು. ಲಕ್ಯಾದ ಮಾಜಿ ಅಧ್ಯಕ್ಷೆ ಈರಮ್ಮ ತೆಂಗಿನ ತೋಟದ ಕಾಯಕದಲ್ಲಿ ನಿರತರಾಗಿದ್ದರು.

ಹಂಪಾಪುರ, ಅಲ್ಲಂಪುರ, ಕೈಮರ ಇತ್ಯಾದಿ ಹತ್ತಾರು ಗ್ರಾಮಗಳಲ್ಲಿ ಮತದಾರರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದರು. ಹಂಪಾಪುರದಲ್ಲಿ ಸ್ಪರ್ಧಿಸಿದ್ದ ಮಾವ, ಅಳಿಯ ಹಾಗೂ ಅತ್ತೆ, ಸೊಸೆಯಂದಿರು ಸಮನಾಗಿ ಮತ ಗಳಿಸಿದರೂ ಗೆಲ್ಲುವುದಕ್ಕೆ ಐನಳ್ಳಿ ಮತದಾರರೇ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ವ್ಯಕ್ತವಾಯಿತು.

ಜಿಲ್ಲೆಯ 5290 ಅಭ್ಯರ್ಥಿಗಳ ಭವಿಷ್ಯ ಆಯಾ ತಾಲೂಕಿನ ಭದ್ರತಾ ಕೊಠಡಿಗಳಲ್ಲಿ ಭದ್ರವಾಗಿವೆ. ನಗರದ ಎಸ್​ಟಿಜೆ ಕಾಲೇಜು ಕೊಠಡಿಯಲ್ಲಿ ತಾಲೂಕಿನ ಗ್ರಾಪಂ ಅಭ್ಯರ್ಥಿಗಳ ಮತಪತ್ರಗಳು ಕೊಠಡಿಯಲ್ಲಿಟ್ಟು ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆ ದಿನ ಮತ್ತೆ ಸ್ಪರ್ಧಿಗಳು, ಬೆಂಬಲಿಗರು ಒತ್ತಡಕ್ಕೊಳಗಾಗಲಿದ್ದಾರೆ.

ಕೆಲವೆಡೆ ಜಾತಿ ಮತಗಳೇ ವರ-ಮುಳುವು: ಕ್ಷೇತ್ರದಲ್ಲಿ ಕೆಲವು ಮೀಸಲು ಜಾತಿ ಅಭ್ಯರ್ಥಿಗಳಿಗೆ ಸ್ವಜಾತಿಯವರೇ ಮೂರ್ನಾಲ್ಕು ಎದುರಾಳಿಗಳಾಗಿ ಸ್ಪರ್ಧಿಸಿರುವುದು ಮತ ಹಂಚಿಹೋಗಲು ಕಾರಣವಾಗಿ ಗೆಲುವಿಗೆ ಜಾತಿ ಮತಗಳೇ ಮುಳುವಾಗಿವೆ. ಅದನ್ನರಿತ ಕೆಲ ಅಭ್ಯರ್ಥಿಗಳು ಅನ್ಯಜಾತಿ ಮತದಾರರ ಓಲೈಕೆ ಕಸರತ್ತು ನಡೆಸಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಜಾತಿ ಪ್ರಾಬಲ್ಯವಿರುವ ಏಕಾಂಗಿ ಅಭ್ಯರ್ಥಿ ಸ್ಪರ್ಧಿಸಿದ್ದು ಅವರಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.

ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿತರ ಪೈಪೋಟಿ: ಕ್ಷೇತ್ರ ಹಲವು ಗಾಪಂಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಜಿದ್ದಾಜಿದ್ದಿ ಏರ್ಪಟ್ಟಿದ್ದು ರಾಜ್ಯ ಹಾಗೂ ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಕೊಂಚ ಅನುಕೂಲಕರ ವಾತಾವರಣದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬಯಲು ಭಾಗದಲ್ಲಿ ಕೆಲವು ಸಮುದಾಯದ ಕೈ ಮತ್ತು ಕಮಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೆಂಬಲಿತ ಅಭ್ಯರ್ಥಿಗಳಿಗೆ ಹಣ ಪೂರೈಕೆ ಮಾಡಿದ್ದಾರೆ ಎಂಬ ಮಾತು ಗ್ರಾಮಗಳಿಗೆ ಭೇಟಿ ನೀಡಿದಾಗ ಕೇಳಿ ಬಂದಿದ್ದು. ಒಂದಿಷ್ಟು ಕಡೆ ಜೆಡಿಎಸ್ ಬೆಂಬಲಿತರು ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ.

ಗೆದ್ದಮೇಲೆ ಜಿಗಿಯುವ ಯೋಚನೆ: ಕೆಲ ಅಭ್ಯರ್ಥಿಗಳು ರಾಜಕೀಯ ಪಕ್ಷದಲ್ಲಿ ನೇರವಾಗಿ ಗುರುತಿಸಿಕೊಂಡಿದ್ದರೂ ಸ್ಥಳೀಯವಾಗಿ ಗ್ರಾಮಸ್ಥರೊಂದಿಗೆ ವಿಶ್ವಾಸ ಗಳಿಸಿದವರು ಇದ್ದಾರೆ. ಹಣ, ಹೆಂಡ ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಗೆಲವಿನ ನಿರೀಕ್ಷೆಯಲ್ಲಿದ್ದು ಸಂಬಂಧಪಟ್ಟ ಗ್ರಾಪಂನಲ್ಲಿ ಆಡಳಿತಕ್ಕೆ ಬರುವವರ ಜತೆ ಕುದುರೆ ವ್ಯಾಪಾರದಲ್ಲಿ ಚುನಾವಣೆಗೆ ವ್ಯಯಿಸಿದ ಹಣ ಗಳಿಸಬಹುದೆಂಬ ಮುಂದಾಲೋಚನೆ ಹೊಂದಿದ್ದಾರೆ. ಪಂಚಾಯಿತಿ ಆಡಳಿತದಲ್ಲಿ ಬಹುಮತ ಹೊಂದದೆ ಒಂದು, ಎರಡು ಸ್ಥಾನ ಏರುಪೇರಾದಲ್ಲಿ ಮಾತ್ರ ಅಂಥವರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಆ ರೀತಿ ಯೋಚನೆಯಲ್ಲಿ ಗೆದ್ದವರು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂತಾಗುತ್ತಾರೆ. ರಾಜಕೀಯದಲ್ಲೂ ಅಸ್ತಿತ್ವ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net