

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ನೇರಾನೇರ ೈಟ್‌ಗೆ ವೇದಿಕೆ ಸಿದ್ಧಗೊಂಡಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಚುನಾವಣಾ ಕಾವು ಕಾಣಿಸಿಕೊಂಡಿದೆ.
ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳದೆ ಜಿಲ್ಲೆಯಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಚುನಾವಣೆ ಕಾವು ಕೆಲ ದಿನಗಳಿಂದ ಬಿರುಸು ಪಡೆಯತೊಡಗಿದೆ. ಮೈತ್ರಿ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದರಿಂದ ಮೂರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಸ್ಪಷ್ಟತೆ ಇಲ್ಲದೆ ತಟಸ್ಥರಾಗಿದ್ದರು. ಮೊದಲಿಗೆ ಮೈತ್ರಿ ಅಭ್ಯರ್ಥಿ ಹೆಸರು ೈನಲ್ ಆದ ಬಳಿಕ ಜಿಲ್ಲೆಯಲ್ಲಿ ಚುನಾವಣೆ ಬಿಸಿ ಏರತೊಡಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಷಯವಾಗಿ ಅಳೆದುತೂಗುತ್ತಿದ್ದ ಕಾಂಗ್ರೆಸ್ ವರಿಷ್ಠರು ಕಡೆಗೂ ಅಭ್ಯರ್ಥಿ ಹೆಸರನ್ನು ೈನಲ್ ಮಾಡಿದ್ದಾರೆೆ. ಇದರಿಂದ ಮೈಕೊಡವಿಕೊಳ್ಳುತ್ತಿರುವ ಕೈ ಪಡೆಯಲ್ಲಿ ರಣೋತ್ಸಾಹ ಕಾಣಿಸಿಕೊಂಡಿದೆ.
ಎರಡರಲ್ಲೂ ಮುಸುಕಿನ ಗುದ್ದಾಟ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ೋಷಣೆ ವಿಚಾರವಾಗಿ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಪ್ರತಿದಿನ ಒಬ್ಬೊಬ್ಬ ಅಭ್ಯರ್ಥಿ ಹೆಸರು ಮುಂಚೂಣಿಗೆ ಬರುತ್ತಿತ್ತು. ಇದಕ್ಕೂ ಮೊದಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೋ ಅಥವಾ ಜೆಡಿಎಸ್ ಅಭ್ಯರ್ಥಿಯೋ ಎಂಬ ಗೊಂದಲವೂ ಇಣುಕಿತ್ತು. ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆ ಎಂಬರ್ಥದಲ್ಲಿ ಕುಮಾರಸ್ವಾಮಿ ಹೆಸರು ಚಲಾವಣೆಗೆ ಬಂದಿತ್ತು. ಇನ್ನು ಬಿಜೆಪಿಯಿಂದ ಡಾ.ಕೆ.ಸುಧಾಕರ್ ಜತೆಗೆ ಮಾಜಿ ಸಚಿವ ಎಂಟಿಬಿ ನಾಗರಾಜ್, ಅಲೋಕ್ ವಿಶ್ವನಾಥ್ ಹೆಸರೂ ಕೇಳಿಬಂದಿದ್ದರಿಂದ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಲ್ಲೇ ಬಣಗಳು ಏರ್ಪಟ್ಟಿತ್ತು. ಇದರಿಂದ ಯಾವುದೇ ಮುಖಂಡರು ಪಕ್ಷ ಸಂಘಟನೆ ಮತ್ತಿತರ ಚುನಾವಣಾ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದರು. ಎರಡೂ ಪಕ್ಷದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಇದೀಗ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದರಿಂದ ಎರಡೂ ಪಕ್ಷದ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಚುನಾವಣಾ ಕಣಕ್ಕೆ ಕಾವು ನೀಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸುಧಾಕರ್ ರೌಂಡ್ಸ್ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಅವಧಿಯಲ್ಲಿ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದರು. ಅದರ ಹೊರತಾಗಿ ಗ್ರಾಮಾಂತರ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎಂಬ ಬೇಸರ ದೂರಮಾಡಲು ಜಿಲ್ಲೆಯಲ್ಲಿ ರೌಂಡ್ಸ್ ಆರಂಭಿಸಿರುವ ಸುಧಾಕರ್ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಮಾಜಿ ಸಚಿವ ಎಂಟಿಬಿ ನಾಗರಾಜ್ ಇದ್ದಾರೆ ಎಂಬ ಕಾರಣಕ್ಕೆ ಹೊಸಕೋಟೆ ಹಾಗೂ ಶಾಸಕ ಧೀರಜ್ ಮುನಿರಾಜು ಗ್ಯಾರಂಟಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಆದ್ಯತೆ ನೀಡಿರುವ ಮೈತ್ರಿ ಅಭ್ಯರ್ಥಿ ನೆಲಮಂಗಲ ಹಾಗೂ ದೇವನಹಳ್ಳಿ ಕಡೆಗೂ ಚಿತ್ತ ನೆಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ಕ್ಷೇತ್ರಗಳಿಗಿಂತಲೂ ಗ್ರಾಮಾಂತರ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಮತ ಗಟ್ಟಿ ಮಾಡಿಕೊಳ್ಳಲು ಮೈತ್ರಿ ಅಭ್ಯರ್ಥಿ ಬೆವರು ಹರಿಸುತ್ತಿದ್ದಾರೆ.
ಸಮನ್ವಯ ಸಭೆ ಚುರುಕಿಲ್ಲ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಣೋತ್ಸಾಹ ತೋರಿಸುತ್ತಿದ್ದರೆ ಜೆಡಿಎಸ್‌ನಲ್ಲಿ ಅಂಥ ಉತ್ಸಾಹ ಕಂಡುಬರುತ್ತಿಲ್ಲ. ಮೈತ್ರಿ ಅಭ್ಯರ್ಥಿ ಬಿಜೆಪಿ ಮುಖಂಡರನ್ನೇ ಎಡತಾಕುತ್ತಿರುವುದರಿಂದ ಜೆಡಿಎಸ್ ಮುಖಂಡರಿಗೆ ಅಷ್ಟೇನು ಮನ್ನಣೆ ಕಂಡುಬರುತ್ತಿಲ್ಲವಾದರೂ ಎರಡನೇ ಹಂತದಲ್ಲಿ ಸಮನ್ವಯ ಸಭೆಗೆ ಆದ್ಯತೆ ನೀಡಲು ತಂತ್ರ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಜೋಡೆತ್ತಿನಂತೆ ಎರಡೂ ಪಕ್ಷದ ಮುಖಂಡರು ಏಕಾಂಗಿ ಕೈಪಡೆ ವಿರುದ್ಧ ಸೆಣಸಾಡಲು ಸಜ್ಜುಗೊಳ್ಳುತ್ತಿದ್ದಾರೆ.
ಕೈ ಕಣದಲ್ಲಿ ರಕ್ಷಾ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಮಾಜಿ ಸಿಎಂ ವೀರಪ್ಪಮೊಯ್ಲಿ ಹೆಸರು ಮುಂಚೂಣಿಯಲ್ಲಿತ್ತು. ಮಾಜಿ ಸಚಿವ ಶಿವಶಂಕರರೆಡ್ಡಿ ಹೆಸರೂ ಹರಿದಾಡುತ್ತಿತ್ತು. ಆದರೆ ಈ ಹಿಂದಿನಿಂದಲೂ ಯುವ ಕಾಂಗ್ರೆಸ್‌ನ ರಕ್ಷಾರಾಮಯ್ಯ ಹೆಸರು ಚಾಲ್ತಿಯಲ್ಲಿತ್ತು. ಹೆಸರು ಅಂತಿಮವಾಗುವ ವೇಳೆ ಕೈ ಪಡೆಯಲ್ಲಿ ಬಣ ರಾಜಕೀಯ ಕಾಣಿಸಿಕೊಂಡಿತ್ತು. ಆದರೆ ವೀರಪ್ಪಮೊಯ್ಲಿ ಮನವೊಲಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಹೈ ಕಮಾಂಡ್ ರಕ್ಷಾರಾಮಯ್ಯ ಅವರನ್ನು ಕಣಕ್ಕಿಳಿಸಿದ್ದು ಜಿಲ್ಲೆಯಲ್ಲಿ ರಕ್ಷಾ ಹೆಸರು ಸದ್ದು ಮಾಡತೊಡಗಿದೆ. ಈ ಹಿನ್ನೆಲೆಯಲ್ಲಿ ನೇರಾ ನೇರಾ ೈಟ್‌ಗೆ ಅಖಾಡ ಸಜ್ಜುಗೊಂಡಿದ್ದು ಎದುರಾಳಿಗಳ ನಡುವೆ ತಂತ್ರ-ಪ್ರತ್ಯಂತ್ರಗಳು ರೂಪುಗೊಳ್ಳುತ್ತಿವೆ.