ಸಿರಗುಪ್ಪ ನಗರಸಭೆ, ತೆಕ್ಕಲಕೋಟೆ ಪಪಂ ಚುನಾವಣೆ; ಬಹಿರಂಗ ಪ್ರಚಾರಕ್ಕೆ ತೆರೆ

070220 Siriguppa Voting Awarness Programmee
Published on

ಸಿರಗುಪ್ಪ: ನಗರಸಭೆ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಶುಕ್ರವಾರದಿಂದ ಮನೆ ಮನೆ ಭೇಟಿ ನೀಡಲಿದ್ದಾರೆ.

ಕಳೆದೊಂದು ವಾರದಿಂದ ನಗರಸಭೆ ಹಾಗೂ ಪಪಂ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಜೋರಾಗಿತ್ತು. ಬಿಜೆಪಿ ಅಭ್ಯರ್ಥಿಗಳ ಪರ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹಾಗೂ, ಸಂಸದ ಕರಡಿ ಸಂಗಣ್ಣ, ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಸೇರಿ ಮುಖಂಡರು ಭರ್ಜರಿ ಮತ ಬೇಟೆ ನಡೆಸಿದ್ದರು. ಅದರಂತೆ ಕಾಂಗ್ರೆಸ್ ಜಿಲ್ಲಾ, ಸ್ಥಳೀಯ ಕಾರ್ಯಕರ್ತರು ಹಾಗೂ ಜೆಡಿಎಸ್ ಹುರಿಯಾಳುಗಳ ಪರ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಇತರರು ಪ್ರಚಾರ ನಡೆಸಿದರೆ, ಪಕ್ಷೇತರ ಅಭ್ಯರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಕ್ಯಾಂಪೇನ್‌ನಲ್ಲಿ ತೊಡಗಿಕೊಂಡಿದ್ದರು. ಬಹಿರಂಗ ಪ್ರಚಾರ ಮುಕ್ತಾಯಗೊಂಡಿದ್ದರಿಂದ ಎಲ್ಲ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಮನ ಸೆಳೆಯುವ ಕಸರತ್ತು ನಡೆಸಲಿದ್ದಾರೆ. ಮತದಾರ ಯಾರಿಗೆ ಜಯ ನೀಡಲಿದ್ದಾನೆ ಎಂಬುದನ್ನು ಫೆ.9ರವರೆಗೆ ಕಾದು ನೋಡಬೇಕು.

ಮತದಾನ ಪ್ರಕ್ರಿಯೆ ಆರಂಭವಾಗುವ 48 ಗಂಟೆಗಳ ಒಳಗೆ ಬಹಿರಂಗ ಪ್ರಚಾರ ನಿಲ್ಲಿಸಬೇಕು. ಫೆ.7ರ ಬೆಳಗ್ಗೆ 7ರ ನಂತರ ಯಾವುದೇ ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಯಾವುದೇ ವಿಧದಲ್ಲಿ ಬಹಿರಂಗ ಪ್ರಚಾರ ಮಾಡಬಾರದು. ಪ್ರಚಾರಕ್ಕಾಗಿ ತಾರಾ ಪ್ರಚಾರಕರು ಮತ್ತು ಇತರೆ ವ್ಯಕ್ತಿಗಳು ಬಂದಿದ್ದಲ್ಲಿ ಚುನಾವಣೆ ಸ್ಥಳ ಕಡ್ಡಾಯವಾಗಿ ಬಿಡಬೇಕು. ನೀತಿ ಸಂಹಿತೆ ಉಲ್ಲಂಘಿಸಿದರೆ ದಂಡದ ಜತೆಗೆ ಕ್ರಮಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಅಧೀನ ಕಾರ್ಯದರ್ಶಿ ನಾಗರಾಜು.ಎನ್.ಆರ್ ತಿಳಿಸಿದ್ದಾರೆ.

ತೆಕ್ಕಲಕೋಟೆಯಲ್ಲಿ ಮತದಾನ ಜಾಗೃತಿ ಜಾಥಾ
ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಿ ಮತದಾನದ ಹಕ್ಕು ಚಲಾಯಿಸಬೇಕು ಎಂದು ಚುನಾವಣಾಧಿಕಾರಿ ಪಿ.ಡಿ.ಭಜಂತ್ರಿ ತಿಳಿಸಿದರು. ತೆಕ್ಕಲಕೋಟೆಯ ಪಪಂ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಮತದಾರರಿಗೆ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಸಂವಿಧಾನ ಮತದಾನದ ಹಕ್ಕು ನೀಡಿದ್ದು, ಫೆ.9ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಾಧಿಕಾರಿ ಕಂಪಳಮ್ಮ ಮಾತನಾಡಿದರು. ಪಪಂ ಸಿಬ್ಬಂದಿ ಹುಸೇನಿಬಾಷಾ, ಸುಬ್ರಹ್ಮಣಿ, ಶೋಭಾ, ರೇಣುಕಾ, ಷಣ್ಮುಖ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net