

ಶಿವಮೊಗ್ಗ: ದೇಶದ ಸಂಕಷ್ಟ ಎಂದರೆ ಅದು ಚುನಾವಣೆಗಳು ಎಂಬಂತಾಗಿವೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದ್ದು ಚುನಾವಣೆಗಳಲ್ಲಿ ಆಮೂಲಾಗ್ರ ಸುಧಾರಣೆಯನ್ನು ಕಾಣಲೇಬೇಕಿದೆ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ಜಿಲ್ಲಾ ಜಾಗೃತ ಮತದಾರರ ವೇದಿಕೆಯಿಂದ ಚುನಾವಣೆ ಸುಧಾರಣೆ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ಚುನಾವಣೆಯ ಎಲ್ಲ ಅಕ್ರಮಗಳಿಗೆ ತಡೆ ಬೀಳಬೇಕಾದರೆ ಆಯೋಗವು ಅಧಿಸೂಚನೆ ಹೊರಡಿಸಿದ ಎಂಟು ದಿನದಲ್ಲೇ ಚುನಾವಣೆ ಪೂರ್ಣಗೊಳ್ಳಬೇಕು. ಈ ಬಗ್ಗೆ ಕಾನೂನು ಸಲಹೆ ಪಡೆಯುವುದು ಉತ್ತಮ. ನಿವೃತ್ತ ನ್ಯಾಯಾಧೀಶರು ಮತ್ತು ತಜ್ಞರು ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಂಸತ್ ಮತ್ತು ವಿಧಾನಸಭೆಗಳಲ್ಲಿ ಜನರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಆಡಳಿತ ವ್ಯವಸ್ಥೆ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹಣ ಇದ್ದವರಿಗೆ ರಾಜ್ಯಸಭಾ ಟಿಕೆಟ್ ನೀಡುವಂತಾಗಿದೆ. ವಿಧಾನಸಭೆಯಲ್ಲೂ ಲ್ಯಾಂಡ್, ಲಿಕ್ಕರ್ ಮತ್ತು ಮೆಡಿಕಲ್ ಮಾಫಿಯಾ ತೀವ್ರವಾಗಿದೆ. ವಿಧಾನಸಭೆಗೆ ಅನ್ಯಮಾರ್ಗದಿಂದ ಹೋಗುವವರೇ ಹೆಚ್ಚಾಗಿದ್ದಾರೆ. ಜನರನ್ನಾಳುವ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.
ಚುನಾವಣೆ ಸಂದರ್ಭಗಳಲ್ಲಿ ಹುಚ್ಚು ಹೇಳಿಕೆಗಳನ್ನು ನೀಡುವುದಕ್ಕೆ ಬ್ರೇಕ್ ಬೀಳಬೇಕಿದೆ. ಹಿಂದೆ ಯಾವುದೇ ಮಾಧ್ಯಮಗಳು ಇರಲಿಲ್ಲ. ಆದರೂ ಚುನಾವಣೆಗಳು ಯಶಸ್ವಿಯಾಗಿ ನಡೆಯುತ್ತಿದ್ದವು. ಪ್ರಸ್ತುತ ಸದನಗಳಲ್ಲಿ ಪರಿಣಾಮಯಾಗಿ ಯಾವುದೇ ವಿಷಯಗಳ ಮೇಲೆ ಚರ್ಚೆಗಳೇ ನಡೆಯುತ್ತಿಲ್ಲ. ಬರೀ ಆರೋಪ-ಪ್ರತ್ಯಾರೋಪ ಮಾಡುವುದರಲ್ಲೇ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯ ಅಧಿಕಾರ ಕುಗ್ಗಿಸಿ ಕೇಂದ್ರೀಕೃತ ಅಧಿಕಾರ ನಡೆಸುತ್ತಿರುವುದು ಸರಿಯಲ್ಲ ಎಂದರು.
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಭ್ರಷ್ಟಾಚಾರ ಹಿಂದೆ ಮೇಲ್ಪಟ್ಟದಲ್ಲಿತ್ತು. ಈಗ ಕೆಳ ಮಟ್ಟದಿಂದಲೇ ಶುರುವಾಗಲಿದೆ. ಮತದಾರರಿಗೆ ಹಣ ಕೊಡದೇ ಗೆಲ್ಲುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ತಲುಪಿದೆ. ಹಣ, ಧರ್ಮ, ಜಾತಿ ಬಿಟ್ಟು ಯೋಗ್ಯರಿಗೆ ಬೆಂಬಲಿಸುವ ಕೆಲಸ ಆಗಬೇಕು. ಆ ಆಶಾವಾದವು ಈಗಿನಿಂದಲೇ ಶುರುವಾದರೆ ಕನಿಷ್ಠ ಮುಂದಿನ ಎರಡು ದಶಕಗಳಲ್ಲಿ ಅದು ಈಡೇರುವ ವಿಶ್ವಾಸವಿದೆ ಎಂದರು.
ವೇದಿಕೆ ಸಂಚಾಲಕ ಕೆ.ಸಿ.ಬಸವರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ರೈತ ಮುಖಂಡ ಕೆ.ಟಿ.ಗಂಗಾಧರ್, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಬಿ.ಎಸ್.ತಿಮ್ಮೋಲಿ, ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ಪ್ರಮುಖರಾದ ಕೆ.ಆರ್.ಲಿಂಗಪ್ಪ, ಬಿ.ಪ್ರೇಮಾ ಮತ್ತಿತರರಿದ್ದರು.