ಕಲ್ಪತರು ನಾಡಿನಿಂದ ಹೆಚ್ಚು ಸ್ಥಾನ ಗೆದ್ದರಷ್ಟೇ 2023ರಲ್ಲಿ ಯಾವುದೇ ರಾಜಕೀಯ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸುವ ಅವಕಾಶ ಗಿಟ್ಟಿಸಲಿದೆ. ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ ಬಿಜೆಪಿಯ ಐವರು ಹಾಗೂ ಕಾಂಗ್ರೆಸ್, ಜೆಡಿಎಸ್ ತಲಾ ಮೂವರು ಶಾಸಕರಿದ್ದಾರೆ. ಘಟಾನುಘಟಿ ನಾಯಕರೇ ತುಂಬಿರುವ ಜಿಲ್ಲಾ ಕಾಂಗ್ರೆಸ್ನಲ್ಲಿ ಮೂರು ದಶಕಗಳಿಂದಲೂ ಹೊಸ ನಾಯಕತ್ವ ಬೆಳೆಸದಿರುವುದು ಸಂಘಟನೆಯನ್ನು ಮಂಕಾಗಿಸಿದ್ದರೆ, ನಾವಿಕನಿಲ್ಲದ ದೋಣಿಯಂತಾಗಿರುವ ಜೆಡಿಎಸ್ ಭದ್ರಕೋಟೆ ಸಂಪೂರ್ಣ ಶಿಥಿಲಗೊಂಡಂತೆ ಭಾಸವಾಗುತ್ತಿದೆ. ರಾಜ್ಯದಲ್ಲಿ ಅಧಿಕಾರ, ಜಿಲ್ಲೆಯಲ್ಲಿ ಇಬ್ಬರು ಮಂತ್ರಿಗಳಿದ್ದರೂ ಇಡೀ ಜಿಲ್ಲೆಯನ್ನು ಮುನ್ನಡೆಸಬಲ್ಲ ಸಮರ್ಥ ನಾಯಕತ್ವದ ಕೊರತೆ ಬಿಜೆಪಿಗೆ ಕಾಡಲಿದೆ. ಆದರೂ, ಸಂಘಟನೆ ಬಲ ಹೆಚ್ಚು ಸ್ಥಾನ ತಂದುಕೊಡುವ ವಿಶ್ವಾಸ ಆ ಪಕ್ಷಕ್ಕಿದೆ.