ಗ್ಯಾರಂಟಿ ಯೋಜನೆಗಳಿಗೆ ಜನಾಭಿಪ್ರಾಯ

hk PATIL
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶವು ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನಾಭಿಪ್ರಾಯವಾಗಿರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಕಳೆದ 10 ತಿಂಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರು 163.52 ಕೋಟಿ ಬಾರಿ ಪ್ರಯಾಣಿಸಿದ್ದಾರೆ. ಇದಕ್ಕೆ 3908.96 ಕೋಟಿ ರೂ. ವ್ಯಯಿಸಿದ್ದೇವೆ. ಗೃಹ ಜ್ಯೋತಿ ಯೋಜನೆಯಡಿ 1.60 ಕೋಟಿ ಫಲಾನುಭವಿಗಳು 3644 ಕೋಟಿ ರೂ. ಲಾಭ ಪಡೆದಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯಡಿ 1.21 ಕೋಟಿ ಫಲಾನುಭವಿಗಳಿಗೆ 13,264 ಕೋಟಿ ರೂ., ಅನ್ನ ಭಾಗ್ಯ ಯೋಜನೆಯಡಿ 4.40 ಕೋಟಿ ಫಲಾನುಭವಿಗಳಿಗೆ 4411.5 ಕೋಟಿ ರೂ. ವೆಚ್ಚದಲ್ಲಿ ಅಕ್ಕಿ ವಿತರಣೆ ಮಾಡಿದ್ದೇವೆ ಎಂದು ವಿವರಿಸಿದರು.

ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ವಿಷಯದಲ್ಲಿ ರಾಜ್ಯದ ಜನತೆಗೆ ಬಿಜೆಪಿ ಮೋಸ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿಯ ಪತ್ರ ತೋರಿಸಿ ಜನರನ್ನು ಮೋಸ ಮಾಡಿದ್ದರು. ಈ ವರ್ಷ ಜನೆವರಿ 30ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಯೋಜನೆ ಹಾದು ಹೋಗುವ ಪ್ರದೇಶದಲ್ಲಿರುವ ಟೈಗರ್ ರಿಸರ್ವ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದೆ ಮುಂದೂಡಲಾಗಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಅನಿಲಕುಮಾರ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net