

ಚಿಕ್ಕಬಳ್ಳಾಪುರ: ರಾಜಕೀಯ ದುರುದ್ದೇಶದಿಂದ ಆಡಳಿತ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡು ಚಿಕ್ಕಬಳ್ಳಾಪುರ ಉತ್ಸವ ಆಚರಿಸಲಾಗುತ್ತಿದೆ. ಇದು ಚುನಾವಣೆಯ ಲಾಭದ ಲೆಕ್ಕಾಚಾರದಲ್ಲಿ ಜನರಿಗೆ ಮಂಕು ಬೂದಿ ಎರಚುವ ಸ್ವಾರ್ಥದ ತಂತ್ರಗಾರಿಕೆಯಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಅನುದಾನದಲ್ಲಿ ಹಮ್ಮಿಕೊಂಡಿರುವ ಚಿಕ್ಕಬಳ್ಳಾಪುರ ಉತ್ಸವವನ್ನು ಜಿಲ್ಲೆಯ ಬದಲಿಗೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸಲಾಗಿದೆ. ಅಧಿಕಾರಿಗಳನ್ನು ಕಾರ್ಯಕ್ರಮದ ಹೆಸರಿನಲ್ಲಿ ಚುನಾವಣಾ ಪ್ರಚಾರಕ್ಕೆ ಈಗಲೇ ಬಳಸಿಕೊಳ್ಳಲಾಗುತ್ತಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್ ಮಾತನಾಡಿ, ಈ ಹಿಂದಿನ ಪ್ರಾಮಾಣಿಕ ಅಧಿಕಾರಿಗಳು ಸಚಿವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಎಂಬ ಭಾವನೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸಲಾಯಿತು ಎಂದು ಆರೋಪಿಸಿದರು. ಜನವರಿಯಲ್ಲಿ ಶತಾಯ ಗತಾಯ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟಿಸಬೇಕೆಂಬ ಲೆಕ್ಕಾಚಾರದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇದಕ್ಕೆ ಕಟ್ಟಡದ ಛಾವಣಿ ಕುಸಿದು, 9 ಮಂದಿ ಕಾರ್ಮಿಕರು ಗಾಯ ಗೊಂಡಿರುವುದೇ ನಿದರ್ಶನ. ಎಚ್.ಎನ್.ವ್ಯಾಲಿ ಯೋಜನೆಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವುದು ಹಾನಿಕಾರಕ ಎಂಬ ವಿಜ್ಞಾನಿಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ನಡುವೆ ಕಾರ್ಯಕ್ರಮಕ್ಕೆ ಮೊದಲೇ ಆರೋಗ್ಯ ಮೇಳದ ವಿಶ್ವದಾಖಲೆಯನ್ನು ಘೋಷಿಸಲಾಯಿತು ಎಂದು ವ್ಯಂಗ್ಯವಾಡಿದರು. ಯುವ ಮುಖಂಡರಾದ ಸಾಧಿಕ್ ಪಾಷಾ, ಶ್ರೀಧರ್, ರಾಮು, ನಾರಾಯಣಸ್ವಾಮಿ, ಅಖಿಲ್ ರೆಡ್ಡಿ ಮತ್ತಿತರರು ಇದ್ದರು.
ಮುಸ್ಟೂರು ರಸ್ತೆಗೆ ಅವೈಜ್ಞಾನಿಕ ಸರ್ವೇ:
ಚಿಕ್ಕಬಳ್ಳಾಪುರ ತಾಲೂಕಿನ ಮುಸ್ಟೂರು ರಸ್ತೆಯ ಅಗಲೀಕರಣ ಮತ್ತು ನಿರ್ಮಾಣದ ವಿಚಾರದಲ್ಲಿ ತಹಸೀಲ್ದಾರ್ ಗಣಪತಿಶಾಸ್ತ್ರಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು ಕಿಡಿಕಾರಿದರು. ರಸ್ತೆ ನಿರ್ಮಾಣಕ್ಕೆ ಮೊದಲು ಸಮರ್ಪಕ ಸರ್ವೇ ನಡೆಯುತ್ತಿಲ್ಲ. ಮೊದಲಿನಿಂದಲೂ ಗುರುತಿಸಲಾದ ಸ್ಥಳವನ್ನು ಬಿಟ್ಟು ರಸ್ತೆ ಬದಿಯಲ್ಲಿನ ರೈತರ ಜಮೀನಿನ ಜಾಗವನ್ನು ಪಡೆದುಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಮಾಲೀಕರೊಂದಿಗೆ ಚರ್ಚಿಸಿ, ಅಭಿಪ್ರಾಯ ಪಡೆಯುವ ಇಲ್ಲವೇ ನಿಯಮ ಪಾಲನೆ ಬಗ್ಗೆ ವಿವರಿಸುವ ಗೋಜಿಗೆ ಹೋಗುತ್ತಿಲ್ಲ. ನ್ಯಾಯಾಲಯದ ಆದೇಶ ಧಿಕ್ಕರಿಸಲಾಗುತ್ತಿದೆ ಎಂದು ಆರೋಪಿಸಿದರು.