ಅಕ್ರಮಕ್ಕೆ ಅವಕಾಶ ನೀಡಬೇಡಿ - ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

1010
Published on

ಬೆಳಗಾವಿ: ಅಕ್ರಮಗಳಿಗೆ ಅವಕಾಶ ನೀಡದಂತೆ ಎಲ್ಲ ಸ್ಥಳಗಳಲ್ಲಿಯೂ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಚುನಾವಣಾ ಸಿಬ್ಬಂದಿಗೆ ಸೂಚಿಸಿದ್ದಾರೆ.

ಜಿಲ್ಲೆಯ ಏಳು ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆಗಳನ್ನು ಭಾನುವಾರ ಆಯಾ ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಪೈಪೋಟಿ ಕಂಡುಬರುತ್ತಿದೆ. ಹೀಗಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಪ್ರತಿಯೊಬ್ಬರೂ ಚುನಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನ್ಯಾಯಸಮ್ಮತ ಮತ್ತು ಪಾರರ್ದರ್ಶಕ ಚುನಾವಣೆಗೆ ಮೊದಲ ಆದ್ಯತೆ ನೀಡಬೇಕು. ಮೊದಲ ಹಂತದಲ್ಲಿ ಡಿ. 22ರಂದು ಹಾಗೂ ಎರಡನೇ ಹಂತದಲ್ಲಿ ಡಿ. 27ರಂದು ಮತದಾನ ಜರುಗಲಿದೆ.

ಚುನಾವಣಾ ಪ್ರಕ್ರಿಯೆಗಳು ಮತ್ತು ನಿಯಮಾವಳಿ ಪಾಲನೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಆದರೂ ಸಂದೇಹ ಬಂದರೆ ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ಸೂಚಿಸಿದರು. ಅಥಣಿ, ಚಿಕ್ಕೋಡಿ, ಕಾಗವಾಡ ಮತ್ತು ನಿಪ್ಪಾಣಿ ತಾಲೂಕುಗಳಿಗೆ ಸಂಬಂಧಿಸಿದಂತೆ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ವ್ಯವಸ್ಥೆ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು. ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net