ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆಗೆ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸೆಸ್ಕ್ ಅಧಿಕಾರಿ ಗಾಯಗೊಂಡಿದ್ದಾರೆ.
ಅಪಘಾತದಿಂದ ಸೆಸ್ಕ್‌ನ ಕಿರಿಯ ಸಹಾಯಕ ವೀರಭದ್ರಪ್ಪ ಬಲಗಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆ.ಆರ್.ಎಸ್ ರಸ್ತೆಯ ಕೂರ್ಗಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ವೀರಭದ್ರಪ್ಪ ಅವರು ಶನಿವಾರ ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಚಾಲಕನ ನಿರ್ಲಕ್ಷೃದಿಂದ ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗೆ ನುಗ್ಗಿದೆ. ಕಾರಿನಡಿ ಸಿಲುಕಿದ ವೀರಭದ್ರಪ್ಪ ಅವರ ಬಲಗಾಲು ಮುರಿದಿದ್ದು, ತಕ್ಷಣ ಅಲ್ಲಿದ್ದ ಇತರರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುವನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆರೋಗ್ಯ ವಿಚಾರಿಸಿದರು.
ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ವಿ.ವಿ.ಪುರಂ ಸಂಚಾರ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ನಡೆಸಿದ್ದಾರೆ.