

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಹೈಕೋರ್ಟ್ ವಕೀಲರ ಸಂಘದ ಪ್ರಸಕ್ತ ವರ್ಷದ ಆಡಳಿತ ಮಂಡಳಿಗೆ ಏರ್ಪಡಿಸಿದ್ದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ವಕೀಲ ವಿ.ಎಂ. ಶೀಲವಂತರ ಆಯ್ಕೆಯಾಗಿದ್ದಾರೆ.
ಧಾರವಾಡ ಹೈಕೋರ್ಟ್ ವಕೀಲ ಸಭಾಭವನದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ವಿ.ಎಂ. ಶೀಲವಂತರ 364 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಬಿ.ಎಸ್. ಸಂಗಟಿ ಅವರನ್ನು ಪರಾಭವಗೊಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಿ.ಬಿ. ಕರಿಗಾರ 196 ಮತ ಪಡೆದರೆ, ಸಂತೋಷ ಮಲಗೌಡರ 272 ಮತಗಳನ್ನು ಪಡೆದು ವಿಜೇತರಾದರು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಎಂ.ಸಿ. ಹುಕ್ಕೇರಿ 138 ಮತ ಪಡೆದರೆ, ಪ್ರತಿಸ್ಪರ್ಧಿ ಆನಂದ ಕೊಳ್ಳಿ 327 ಮತಗಳನ್ನು ಪಡೆದು ಗೆಲುವಿನ ನಗೆ ಬಿರಿದರು.
ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಜಯ ಚಿನ್ನಿವಾಲರ 239 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಚೇತನ ಲಿಂಬಿಕಾಯಿ ಅವರನ್ನು ಸೋಲಿಸಿದರು. ಉಳಿದಂತೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಶಿವರಾಜ ಬೆಳ್ಳಕ್ಕಿ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಮನೋಜ ಬಿಕ್ಕಣ್ಣವರ, ಕೆ.ಎಸ್. ಕೋರಿಶೆಟ್ಟರ್, ಗಾಯಿತ್ರಿ, ದೀಪಾ ದೊಡ್ಡಟ್ಟಿ, ಮಾಹಾಂತೇಶ ಹಿರೇಮಠ ಹಾಗೂ ಮಹಿಳಾ ಪ್ರತಿನಿಧಿಯಾಗಿ ಪೂಜಾ ಸವದತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.