ಮೇಯರ್-ಉಪಮೇಯರ್ ಚುನಾವಣೆ, ಇಡೀ ಪ್ರಕ್ರೀಯೆಯೇ ಗೊಂದಲ...ಅಸ್ಪಷ್ಟ...ನಿಗೂಢ

CORPORATION ELECTION
ವಿಜಯಪುರ ಜಿಲ್ಲಾಡಳಿತಕ್ಕೆ ಬಿಜೆಪಿಯ ಮುಖಂಡರು ಹಾಗೂ ಸದಸ್ಯ ಮತದಾರರು ಮನವಿ ಸಲ್ಲಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ಎನ್.ರವಿಕುಮಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಚುನಾವಣೆ ಅಧಿಕಾರಿಯ ವಿರುದ್ಧ ಆಕ್ರೋಶ, ಪ್ರತಿಭಟನೆ, ಧಿಕ್ಕಾರ, ಜಿಲ್ಲಾಡಳಿತದ ಎದುರು ಸದಸ್ಯರ ಪರೇಡ್, ನಾಯಕರಿಂದ ಮನವಿ, ಆಡಳಿತ ಪಕ್ಷದ ಷಡ್ಯಂತ್ರ ಖಂಡಿಸಿ ಘೋಷಣೆ...ಹೀಗೆ ಹಲವು ಮಹತ್ವದ ಬೆಳವಣಿಗೆಗಳಿಗೆ ವಿಜಯಪುರ ಮಹಾನಗರ ಪಾಲಿಕೆ ಸಾಕ್ಷಿಯಾಯಿತು !

ಸೋಮವಾರ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್-ಉಪಮೇಯರ್ ಸ್ಥಾನಕ್ಕಾಗಿ ನಡೆದ ಚುನಾವಣೆ ಪ್ರಕ್ರಿಯೆ ಕುರಿತು ಚುನಾವಣೆ ಅಧಿಕಾರಿ ನಡೆದುಕೊಂಡ ರೀತಿ ಚುನಾವಣೆ ಆಯೋಗವನ್ನೇ ಸಂಶಯದಿಂದ ನೋಡುವಂತೆ ಮಾಡಿತು.

ಚುನಾವಣೆ ಪ್ರಕ್ರಿಯೆ ನಡೆಸಲು ಅನುಮತಿ ನೀಡಿ ಫಲಿತಾಂಶ ಮಾತ್ರ ಘೋಷಿಸದಂತೆ ನ್ಯಾಯಾಲಯದ ಮಧ್ಯಂತರ ಆದೇಶವಿದ್ದು, ಚುನಾವಣೆ ಅಧಿಕಾರಿ ಇಡೀ ಪ್ರಕ್ರೀಯೆಯನ್ನೇ ಗೊಂದಲಮಯವಾಗಿಸಿ ನಿಗೂಢ ನಡೆ ಕಾಯ್ದುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಯಿತು.

ಆಡಳಿತ ಪಕ್ಷದ ಅಧಿಕಾರ ದುರುಪಯೋಗವೋ....ಚುನಾವಣೆ ಅಧಿಕಾರಿಯ ವೈಫಲ್ಯವೋ...ಸುಲಲಿತವಾಗಿ ಮುಕ್ತಾಯಗೊಳ್ಳಬೇಕಿದ್ದ ಮಹಾನಗರ ಪಾಲಿಕೆ ಮೇಯರ್- ಉಪಮೇಯರ್ ಆಯ್ಕೆ ಪ್ರಕ್ರಿಯೆ ಗೊಂದಲ, ಅಸ್ಪಷ್ಟ ಹಾಗೂ ನಿಗೂಢವಾಗಿಯೇ ಉಳಿಯುವಂತಾಯಿತು. ಚುನಾವಣೆ ಅಧಿಕಾರಿ ವಿರುದ್ಧ ಬಿಜೆಪಿಯ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದ್ದಲ್ಲದೇ ಕೆಲಕಾಲ ಧರಣಿ ನಡೆಸಿದರು. ಬಳಿಕ ಚುನಾವಣೆ ಪ್ರಕ್ರಿಯೆ ಗೊಂದಲಮಯವಾಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕಾರಣರಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪವಾಗಿದೆ ಎಂಬುದಾಗಿಯೂ, ಬಿಜೆಪಿ ಪಕ್ಷದವರು ಕಾಂಗ್ರೆಸ್ ಸದಸ್ಯರನ್ನು ಅಪಹರಿಸಿದ್ದಾರೆಂಬುದಾಗಿಯೂ, ಚುನಾವಣೆ ಮುಂದೂಡಲ್ಪಟ್ಟಿದೆ ಎಂಬುದಾಗಿಯೂ ತಿಳಿಸಿ ಸಚಿವ ಎಂ.ಬಿ. ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್‌ನ ಸದಸ್ಯರೆಲ್ಲರೂ ಹೊರನಡೆದರು.

ಇಷ್ಟೆಲ್ಲಾ ಬೆಳವಣಿಗೆಗಳಾದರೂ ಚುನಾವಣೆ ಅಧಿಕಾರಿ ಮಾತ್ರ ಯಾವುದೇ ಸ್ಪಷ್ಟತೆ ನೀಡದೇ ಇರುವುದು ಆಡಳಿತ ಪಕ್ಷದ ಕೈಗೊಂಬೆ ಎಂಬ ಬಿಜೆಪಿಗರ ಆರೋಪಕ್ಕೆ ಪುಷ್ಠಿ ನೀಡಿದಂತಾಯಿತು. ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಪ ಸದಸ್ಯರಾದ ಎನ್.ರವಿಕುಮಾರ, ಕೇಶವ ಪ್ರಸಾದ ಮುಂತಾದವರು ಚುನಾವಣೆ ಅಧಿಕಾರಿ ಹಾಗೂ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net