

ಮಡಿಕೇರಿ: ಕೊಡಗು ಗೌಡ ವಿದ್ಯಾ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬೆಕಲ್ಲು ನವೀನ್ ಕುಶಾಲಪ್ಪ ೧,೧೧೮ ಮತ ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ನಗರದ ಕೊಡಗು ಗೌಡ ಸಮಾಜ ಆವರಣದಲ್ಲಿ ಭಾನುವಾರ ಬೆಳಿಗ್ಗೆ ೭.೩೦ ರಿಂದ ಮಧ್ಯಾಹ್ನ ೨.೩೦ರ ವರೆಗೆ ೬ ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ೫,೧೦೦ ಸದಸ್ಯರ ಪೈಕಿ ೨೦೮೮ ಸದಸ್ಯರು ಮತದಾನ ಮಾಡಿದರು. ಇದರಲ್ಲಿ ೩೮ ಮತಗಳು ಅಸಿಂಧುಗೊಂಡಿತ್ತು.
ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧಿಕಾರಿ ಪ್ರತಿ ಸ್ಥಾನಕ್ಕೆ ಇಬ್ಬರು ಹಾಗೂ ಉಳಿದ ೬ ನಿರ್ದೇಶಕ ಸ್ಥಾನಕ್ಕೆ ಒಟ್ಟು ೧೨ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ಯದರ್ಶಿಯಾಗಿ ಪೇರಿಯನ ಉದಯಕುಮಾರ್, ಜಂಟಿ ಕಾರ್ಯದರ್ಶಿಯಾಗಿ ತಳೂರು ಕೆ.ದಿನೇಶ್‌ಕುಮಾರ್, ನಿರ್ದೇಶಕರುಗಳಾಗಿ(ಮಹಿಳಾ ಮೀಸಲು) ಕೆದಂಬಾಡಿ ಕಾಂಚನ ಕೀರ್ತನ, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ರೇವತಿ ರಮೇಶ್ ಅವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಅಂಬೆಕಲ್ಲು ನವೀನ್ ಕುಶಾಲಪ್ಪ ೧,೧೧೮ ಮತ ಅಧ್ಯಕ್ಷರಾಗಿ ಆಯ್ಕೆಗೊಂಡರೆ, ಎದುರಾಳಿ ಕಟ್ಟೆಮನೆ ಸೋನಾ ೯೪೯ ಮತ ಪಡೆದು ಪರಾಜಿತಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಮೆ.ಸಿ.ಸೀತಾರಾಮ ೧೧೦೯ ಮತ ಪಡೆದು ಜಯಗಳಿಸಿದರೆ, ಕೆದಂಬಾಡಿ ಎಸ್.ಕೀರ್ತಿಕುಮಾರ್ ೯೪೫ ಮತದಿಂದ ಸೋಲು ಅನುಭವಿಸಿದರು. ಕೋಶಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಳೇರಮ್ಮನ ಎನ್.ಲತಾ ೧೦೪೫ ಮತಗಳಿಸಿ ಗೆದ್ದರೆ, ಪೈಕೇರ ಮನೋಹರ ಮಾದಪ್ಪ ೧೦೧೫ ಅಲ್ಪಮತಗಳಿಂದ ಪರಭಾವಗೊಂಡರು.
ಸಂಘದ ಚುನಾವಣಾಧಿಕಾರಿಯಾಗಿ ಕಾಳೇರಮ್ಮನ ಗೋಪಾಲ ಹಾಗೂ ಸಹಾಯಕರಾಗಿ ದೇವಜನ ಮೋಹನ್, ದಿವಾಕರ್ ಸೇರಿದಂತೆ ಶಿಕ್ಷಕರು ಕಾರ್ಯನಿರ್ವಹಿಸಿದರು.