

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಯ ನೂತನ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ಕೇವಲ 4 ದಿನಗಳು ಬಾಕಿ ಉಳಿದಿವೆ. ಆಡಳಿತಾರೂಢ ಬಿಜೆಪಿಯಲ್ಲಿ ಸದ್ಯದ ಮಟ್ಟಿಗೆ ಅಷ್ಟೇನೂ ತುರುಸಿನ ಚಟುವಟಿಕೆ ಕಂಡು ಬಾರದಿದ್ದರೂ, ಆಕಾಂಕ್ಷಿಗಳು ನಿಧಾನವಾಗಿ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಮೇಯರ್ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಸಹಜವಾಗಿಯೇ ಪೈಪೋಟಿ ಕಡಿಮೆ. ಬಿಜೆಪಿಯಲ್ಲಿ ಮಾಜಿ ಮೇಯರ್ ರಾಧಾಬಾಯಿ ಸಪಾರೆ ಹೊರತುಪಡಿಸಿದರೆ, ಉಳಿದ ಮಹಿಳಾ ಸದಸ್ಯೆಯರು ಮೊದಲ ಬಾರಿಗೆ ಚುನಾಯಿತರಾದವರು. ಇಂಥ ಪರಿಸ್ಥಿತಿಯಲ್ಲಿ ಯಾರಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿ ಮುಖಂಡರಿಗೆ ಸವಾಲೇ ಸರಿ. ಉಪ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವುದಿಲ್ಲ. ಒಮ್ಮೆ ಉಪ ಮೇಯರ್ ಸ್ಥಾನ ಒಪ್ಪಿಕೊಂಡರೆ ಮುಂದೆ ಮೇಯರ್ ಸ್ಥಾನ ತಪ್ಪಬಹುದು ಎಂಬ ಲೆಕ್ಕಾಚಾರ ಇಲ್ಲಿ ಅಡಗಿದೆ.
ಜೂ. 20ರಂದು ಧಾರವಾಡದ ಪಾಲಿಕೆಯ ಅಮೃತ ಮಹೋತ್ಸವ ಸಭಾಭವನದಲ್ಲಿ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆ ನಿಗದಿಯಾಗಿದೆ. ಈ ಸಂಬಂಧ ಇಲ್ಲಿಯವರೆಗೆ ಬಿಜೆಪಿಯಲ್ಲಿ ಯಾವುದೇ ಸಭೆ ನಡೆದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜೂ. 18ರಂದು ಹುಬ್ಬಳ್ಳಿಗೆ ಆಗಮಿಸಲಿದ್ದು, ಅವರು ಬಂದ ಬಳಿಕವೇ ಬಿಜೆಪಿಯಲ್ಲಿ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಬಲ ಪಡೆಯಲಿದೆ.
ಮೇಯರ್-ಉಪ ಮೇಯರ್ ಆಯ್ಕೆಯು ಅವಳಿ ನಗರದ ವಿಧಾನಸಭೆ ಕ್ಷೇತ್ರಗಳಾದ ಹು-ಧಾ ಸೆಂಟ್ರಲ್ ಮತ್ತು ಹು-ಧಾ ಪಶ್ಚಿಮ ನಡುವಿನ ಪೈಪೋಟಿಯಾಗಿದೆ. ಇತ್ತೀಚೆಗೆ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಅವಧಿಯಲ್ಲಿ ಸೆಂಟ್ರಲ್ ಕ್ಷೇತ್ರಕ್ಕೆ ಉಪ ಮೇಯರ್ (ಉಮಾ ಮುಕುಂದ) ಹಾಗೂ ಧಾರವಾಡ ಕ್ಷೇತ್ರಕ್ಕೆ ಮೇಯರ್ (ಈರೇಶ ಅಂಚಟಗೇರಿ) ಸ್ಥಾನ ದಕ್ಕಿತ್ತು. ಈ ಬಾರಿ ಸೆಂಟ್ರಲ್ ಕ್ಷೇತ್ರಕ್ಕೆ ಮೇಯರ್ ಹಾಗೂ ಹು-ಧಾ ಪಶ್ಚಿಮಕ್ಕೆ ಉಪ ಮೇಯರ್ ಸ್ಥಾನ ನೀಡುವ ಸಾಧ್ಯತೆಗಳು ನಿಚ್ಚಳವಾಗಿದೆ.
ಪಶ್ಚಿಮ ಕ್ಷೇತ್ರದಿಂದ ಮೇಯರ್ ಸ್ಥಾನಕ್ಕೆ ಜ್ಯೋತಿ ಪಾಟೀಲ, ಸುನೀತಾ ಮಾಳವದಕರ, ಉಪ ಮೇಯರ್ ಸ್ಥಾನಕ್ಕೆ ವಿಜಯಾನಂದ ಶೆಟ್ಟಿ, ಸತೀಶ ಹಾನಗಲ್, ಸೆಂಟ್ರಲ್ ಕ್ಷೇತ್ರದಿಂದ ಮೇಯರ್ ಸ್ಥಾನಕ್ಕೆ ರೂಪಾ ಶೆಟ್ಟಿ, ಮೀನಾಕ್ಷಿ ವಂಟಮೂರಿ, ಉಮಾ ಮುಕುಂದ, ಸೀಮಾ ಮೊಗಲಿಶೆಟ್ಟರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಂತೋಷ ಚವ್ಹಾಣ ಆಕಾಂಕ್ಷಿಗಳಾಗಿದ್ದಾರೆ. ಅನುಭವವನ್ನು ಪರಿಗಣಿಸಿದರೆ ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯ ರಾಧಾಬಾಯಿ ಸಫಾರೆ ಅವರಿಗೆ ಮೇಯರ್ ಪಟ್ಟ ಒಲಿಯಬಹುದು. ಧಾರವಾಡ ಕ್ಷೇತ್ರದ ನಿತಿನ ಇಂಡಿ ಹಾಗೂ ಶಂಕರ ಶೆಳಕೆ ಉಪ ಮೇಯರ್ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಒಟ್ಟು 82 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33 ಸದಸ್ಯರನ್ನು ಹೊಂದಿದೆ. ಎಐಎಂಐಎಂನಿಂದ 3, ಪಕ್ಷೇತರರು 6 ಹಾಗೂ ಜೆಡಿಎಸ್‌ನಿಂದ ಒಬ್ಬರು ಚುನಾಯಿತರಾಗಿದ್ದರು. ಪಕ್ಷೇತರರಲ್ಲಿ ಮೂವರು (ಕಿಶನ್ ಬೆಳಗಾವಿ, ದುರ್ಗಮ್ಮ ಬಿಜವಾಡ ಹಾಗೂ ಚಂದ್ರಿಕಾ ಮೇಸ್ತ್ರಿ) ಬಿಜೆಪಿಗೆ ಹಾಗೂ ಒಬ್ಬರು (ಅಕ್ಷತಾ ಅಸುಂಡಿ) ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇನ್ನಿಬ್ಬರು ಪಕ್ಷೇತರರಲ್ಲಿ ಒಬ್ಬರು (ಮಂಜುನಾಥ ಬುರ್ಲಿ) ಬಿಜೆಪಿಯತ್ತ ಹಾಗೂ ಇನ್ನೊಬ್ಬರು (ಚೇತನ ಹಿರೇಕೆರೂರು) ಕಾಂಗ್ರೆಸ್‌ನತ್ತ ಒಲವು ಹೊಂದಿದ್ದಾರೆ. ಜೆಡಿಎಸ್ ಸದಸ್ಯೆ ಲಕ್ಷ್ಮಿ ಹಿಂಡಸಗೇರಿ ಅವರ ಬೆಂಬಲ ಬಿಜೆಪಿಗೆ ಇದೆ.
ಪಾಲಿಕೆ ಮೇಯರ್-ಉಪ ಮೇಯರ್ ಆಯ್ಕೆ ಚುನಾವಣೆಯಲ್ಲಿ ಸಂಸದ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತಾಧಿಕಾರ ಹೊಂದಿದ್ದಾರೆ. ಇಲ್ಲಿಯೂ ಸಹ ಬಿಜೆಪಿ ಮೇಲುಗೈ ಹೊಂದಿದೆ. ಸಂಸದ ಪ್ರಲ್ಹಾದ ಜೋಶಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ ಇವರ ಮತಗಳು ಬಿಜೆಪಿಗೆ ಸಿಗಲಿದೆ. ಕಾಂಗ್ರೆಸ್‌ಗೆ ಶಾಸಕ ಪ್ರಸಾದ ಅಬ್ಬಯ್ಯ ಅವರ ಮತ ಮಾತ್ರ ದಕ್ಕಲಿದೆ. ಶಾಸಕ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿದೆ.