ಮೇಯರ್-ಉಪ ಮೇಯರ್ ಚುನಾವಣೆ 30 ರಂದು

hdmc photo
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಿಜೆಪಿ ಆಡಳಿತವಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಆಕಾಂಕ್ಷಿಗಳು ಇನ್ನಷ್ಟು ಉತ್ಸುಕರಾಗಿದ್ದಾರೆ.

ಜೂ. 30ರಂದು ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಚುನಾವಣಾ ಕಾರ್ಯ ಕಲಾಪ ನಡೆಸುವುದಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ. ಹಾಲಿ ಮೇಯರ್ ರಾಮಪ್ಪ ಬಡಿಗೇರ ಹಾಗೂ ಉಪ ಮೇಯರ್ ದುರ್ಗಮ್ಮ ಬಿಜವಾಡ ಅವರ ಅವಧಿ ಜೂ. 28ಕ್ಕೆ ಕೊನೆಗೊಳ್ಳಲಿದೆ. ಹೆಚ್ಚು ವಿಳಂಬ ಮಾಡದೇ ಮುಂದಿನ ಅವಧಿಗೆ ಚುನಾವಣೆ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬ’ ಗೆ ಮೀಸಲಾಗಿದೆ. ಮೇಯರ್ ಸ್ಥಾನಕ್ಕೆ ಶೀಲಾ ಕಾಟ್ಕರ್, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಂತೋಷ ಚವ್ಹಾಣ, ಶಂಕರ ಶೇಳಕೆ, ಆನಂದ ಯಾವಗಲ್ ಆಕಾಂಕ್ಷಿಗಳಾಗಿದ್ದಾರೆ. ಈಗ ತಾನೇ ಚುನಾವಣೆಗೆ ದಿನಾಂಕ ಘೊಷಣೆಯಾಗಿರುವುದರಿಂದ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಇನ್ನೂ ಹೆಚ್ಚಲಿದೆ. ಕಳೆದೊಂದು ತಿಂಗಳಿಂದ ಮೇಯರ್ ಸ್ಥಾನಕ್ಕೆ ಲಾಬಿ ನಡೆಸಿರುವ ಆಕಾಂಕ್ಷಿಗಳು ಅದನ್ನು ಇನ್ನಷ್ಟು ತೀವ್ರಗೊಳಿಸಲಿದ್ದಾರೆ. ಆದರೆ, ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮವಾಗಲಿದೆ.

‘‘ಮೇಯರ್-ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಇಂದು ಆದೇಶ ಹೊರಬಿದ್ದಿದೆ. ಕೋರ್ ಕಮಿಟಿ ಸಭೆ ನಡೆಸಿ ನಮ್ಮ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುತ್ತೇವೆ. ಕೋರ್ ಕಮಿಟಿ ಸಭೆ ಯಾವಾಗ ನಡೆಸಬೇಕು ಎಂಬುದು ಮುಂದೆ ನಿರ್ಧಾರವಾಗಬೇಕಿದೆ’’ ಎಂದು ಪಾಲಿಕೆ ಸದಸ್ಯ, ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net