ಚುನಾವಣೆ ನಡೆಸಿ ಮದ್ರಸಾ ಸಮಿತಿಗೆ ಆಯ್ಕೆ: ಹನ್ನೊಂದು ದಿನಗಳ ಕಾಲ ನಡೆಯಿತು ಪ್ರಕ್ರಿಯೆ : ಎಳವೆಯಲ್ಲೇ ಮತದಾನ ಜಾಗೃತಿಗೆ ಪ್ರಯತ್ನ

madrasa
ಆಲಡ್ಕ ಮದ್ರಸಾ ಮಕ್ಕಳ ಚುನಾವಣಾ ಪ್ರಕ್ರಿಯೆ ನಡೆಯಿತು.
Published on

ಅನ್ಸಾರ್ ಇನೋಳಿ ಉಳ್ಳಾಲ

ನಾಮಪತ್ರ ಸಲ್ಲಿಕೆ, ಹಿಂಪಡೆಯಲು, ಪ್ರಚಾರಕ್ಕೆ ಸಮಯಾವಕಾಶ, ಗುರುತಿನ ಚೀಟಿ ವಿತರಿಸಿ ಮತದಾರರ ಪಟ್ಟಿ ತಯಾರಿ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆಯಿತು.

ಎಳವೆಯಲ್ಲೇ ಚುನಾವಣೆ, ಆಡಳಿತ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹರೇಕಳ ಗ್ರಾಮದ ಆಲಡ್ಕದಲ್ಲಿರುವ ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಮದ್ರಸಾದಲ್ಲಿ ಇಂಥದ್ದೊಂದು ವಿನೂತನ ಪ್ರಯತ್ನ ನಡೆದಿದೆ. ಮದ್ರಸಾ ಮಕ್ಕಳ ಸುನ್ನೀ ಬಾಲ ಸಂಘಕ್ಕೆ 11 ದಿನ ಚುನಾವಣಾ ಪ್ರಕ್ರಿಯೆ ನಡೆದಿರುವುದು ವಿಶೇಷ.

ಮತಗಟ್ಟೆಯಲ್ಲಿತ್ತು ಸಕಲ ವ್ಯವಸ್ಥೆ

ಚುನಾವಣೆಯಲ್ಲಿ ಪಾಲ್ಗೊಳ್ಳಲು 113 ಮತದಾರರನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗಿತ್ತು. 14 ಮಂದಿ ಕಣದಲ್ಲಿದ್ದು, ಚುನಾವಣೆ ಎದುರಿಸಿದರು. ಚುನಾವಣಾಧಿಕಾರಿಯಾಗಿ ಮದ್ರಸಾದ ಶಿಕ್ಷಕರು ಜವಾಬ್ದಾರಿ ವಹಿಸಿದರೆ, ಉತ್ತರಾಧಿಕಾರಿಯಾಗಿ ಹರೇಕಳ ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಮಜೀದ್ ಜವಾಬ್ದಾರಿ ನಿಭಾಯಿಸಿದರು. ವ್ಯವಸ್ಥಾಪಕರಾಗಿ ಸುಹೈಲ್ ಆಲಡ್ಕ ಮತ್ತು ಸವಾದ್ ಆಲಡ್ಕ ಕರ್ತವ್ಯ ನಿರ್ವಹಿಸಿದರು.

ಮತಗಟ್ಟೆ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೀಸಲು ಪೊಲೀಸ್ ಪಡೆಯ ಸಮವಸ್ತ್ರ ಧರಿಸಿ ಕಾವಲಿದ್ದರು. ಒಳಭಾಗದಲ್ಲಿ ಗುರುತು ಚೀಟಿ ಪರಿಶೀಲನೆ, ಬೆರಳಿಗೆ ಶಾಯಿ, ಮತಪತ್ರಕ್ಕೆ ಮೊಹರು, ಡಬ್ಬದ ವ್ಯವಸ್ಥೆ ಇತ್ತು. ಮತಪತ್ರ ಡಬ್ಬಕ್ಕೆ ಹಾಕುವ ಸಂದರ್ಭ ಅಧಿಕಾರಿಗಳಿಗೆ ಗೊತ್ತಾಗಲು ಆಧುನಿಕ ಮಾದರಿಯಲ್ಲಿ ಬಝರ್ ವ್ಯವಸ್ಥೆ ಇತ್ತು. ಮತಪತ್ರ ಡಬ್ಬಕ್ಕೆ ಹಾಕುವ ಸಂದರ್ಭ ಸ್ವಿಚ್ ಒತ್ತಿದಾಗ ಕೆಂಪು ದೀಪ ಉರಿದು ಶಬ್ದ ಬರುತ್ತಿತ್ತು. ಆ ಮೂಲಕ ಆಧುನಿಕ ಶೈಲಿಯ ಚುನಾವಣಾ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು.

ಚುನಾಯಿತ ಪದಾಧಿಕಾರಿಗಳು

ಅಧ್ಯಕ್ಷರಾಗಿ ಶಫೀಖ್ ಪಂಜಿಮಡಿ, ಉಪಾಧ್ಯಕ್ಷರಾಗಿ ಅಮೀನ್ ಆಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಶಯಾಲ್ ಆಲಡ್ಕ, ಕಾರ್ಯದರ್ಶಿಯಾಗಿ ಮುಹಮ್ಮದ್ ಫಾಶಿಹ್, ಕೋಶಾಧಿಕಾರಿಯಾಗಿ ರಿಯಾಫ್ ಆಲಡ್ಕ, ಮದರಸ ಲೀಡರ್‌ಯಾಗಿ ಸುಫೈದ್ ಆಲಡ್ಕ, ಗ್ರೂಪ್ ಲೀಡರ್ ಆಗಿ ಜಾವಿದ್ ಆಲಡ್ಕ, ಗ್ರೂಪ್ ಲೀಡರ್ ಆಗಿ ತಜ್ಮಲ್ ಆಲಡ್ಕ ಆಯ್ಕೆಯಾದರು. ವಿದ್ಯಾರ್ಥಿನಿಯರ ಸಮಿತಿ: ಮದರಸ ಲೀಡರ್ ಆಗಿ ಮಶ್ಹೂರ ಆಲಡ್ಕ, ನೈಟ್ ಲೀಡರ್ ಆಗಿ ಶಾಝಿಯಾ ಆಲಡ್ಕ, ಗ್ರೂಪ್ ಲೀಡರ್ ಆಗಿ ಝುಹಾ, ಹೈಫಾ, ಗ್ರೂಪ್ ಲೀಡರ್ ಆಗಿ ಹಪೀಝ, ಮುಶ್ರೀಫಾ ಆಯ್ಕೆಯಾದರು.

ಎಷ್ಟು ಬಾರಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರೂ ಇಂದಿಗೂ ಮತದಾನ ಮತ್ತು ಮತ ಚಲಾವಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ರಸಾ ಮಟ್ಟದಲ್ಲೇ ಚುನಾವಣಾ ಪ್ರಕ್ರಿಯೆ ಅರಿವಿಗಾಗಿ ಪ್ರಯತ್ನ ನಡೆಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ. - ರಫೀಕ್ ಹರೇಕಳ, ಮಾಜಿ ಉಪಾಧ್ಯಕ್ಷ, ಬದ್ರಿಯಾ ಜುಮಾ ಮಸೀದಿ ಚುನಾವಣೆಗೆ ಸ್ಪರ್ಧಿಸುವುದು, ನಾಮಪತ್ರ ಸಲ್ಲಿಕೆ, ಪ್ರಚಾರ, ಗುರುತಿನ ಚೀಟಿ ಇಂಥ ಅನುಭವ ಮೊದಲ ಬಾರಿಗೆ ಸಿಕ್ಕಿದೆ. ಮತ ಚಲಾಯಿಸುವ ಬಗ್ಗೆ ಇದ್ದ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದು ತುಂಬಾ ಸಂತಸ ತಂದಿದೆ. - ಮಹಮ್ಮದ್ ಶಫೀಕ್ ಪಂಜಿಮಡಿ, ಎಸ್‌ಬಿಎಸ್ ಅಧ್ಯಕ್ಷ https://www.vijayavani.net/does-bjp-not-want-peace-in-the-district-kpcc-working-president-manjunath-bhandari https://www.vijayavani.net/if-the-outsiders-are-silent-peace-will-be-established-by-speaker-ut-khader-vishwas

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net