ಚುನಾವಣೆ ಸಿಬ್ಬಂದಿಗಿಲ್ಲ ಕೋವಿಡ್ ಪರೀಕ್ಷೆ!

01
Published on

ಬೆಳಗಾವಿ: ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ಮಾಡುತ್ತಿಲ್ಲ. ಚುನಾವಣಾ ಕರ್ತವ್ಯದಿಂದ ಯಾರೂ ತಪ್ಪಿಸಿಕೊಳ್ಳಬಾರದೆಂದು ಆಯೋಗ ಎಚ್ಚರಿಕೆ ನೀಡಿದೆ.

ರಾಜ್ಯದ 5,762 ಗ್ರಾಪಂಗಳಿಗೆ ಜರುಗಲಿರುವ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಕೋವಿಡ್-19 ಸೋಂಕಿಗೆ ಹೆದರಿ ಅನಾರೋಗ್ಯದ ನೆಪ ಹೇಳಿಕೊಂಡು ವಿನಾಯಿತಿ ಪಡೆಯುತ್ತಿದ್ದಾರೆ. ಇದರಿಂದ ಕೆಲ ಜಿಲ್ಲೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತಿದೆ.

ಕರ್ತವ್ಯದಿಂದ ವಿನಾಯಿತಿ: ಈಗಾಗಲೇ ರಾಜ್ಯದ 5,762 ಗ್ರಾಪಂನ 45,128 ಮತಗಟ್ಟೆಗಳಿಗೆ 12 ಸಾವಿರ ಪ್ರಮುಖ ಚುನಾವಣಾಧಿಕಾರಿಗಳು, 3 ಲಕ್ಷ ಅಧಿಕಾರಿಗಳು, ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಿದೆ. ಈಗಾಗಲೇ ಇವರಿಗೆ ಚುನಾವಣೆ ತರಬೇತಿ ನೀಡಲಾಗಿದೆ.

ಪ್ರಸಕ್ತ ಚುನಾವಣೆ ಸಂದರ್ಭದಲ್ಲಿ ಕೋವಿಡ್-19 ಕಾರಣದಿಂದಾಗಿ ಚುನಾವಣೆ ಆಯೋಗವು 45 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ನಿಯೋಜಿಸಿಕೊಂಡಿದೆ. ಹೀಗಾಗಿ ಕೃಷಿ, ತೋಟಗಾರಿಕೆ, ಅರಣ್ಯ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸಿಬ್ಬಂದಿ ತಮ್ಮ ಅಧಿಕಾರ ಬಳಸಿಕೊಂಡು ಚುನಾವಣೆ ಕರ್ತವ್ಯದಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದಾರೆ.

‘ಹೃದಯ ಸಂಬಂಧಿ ಕಾಯಿಲೆ, ನಿವೃತ್ತಿ ಅಂಚಿನಲ್ಲಿರುವ ಸಿಬ್ಬಂದಿ, ಚಿಕ್ಕ ಮಗು ಇರುವ ಮಹಿಳಾ ಸಿಬ್ಬಂದಿಗೆ ಚುನಾವಣೆ ಕರ್ತವ್ಯದಿಂದ ವಿನಾಯಿತಿ ಸಿಕ್ಕಿಲ್ಲ’ ಎಂದು ವಿವಿಧ ಇಲಾಖೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಸಿಬ್ಬಂದಿ ವಿವರ: ಚುನಾವಣೆ ಅಧಿಕಾರಿಗಳು-5,847, ಸಹಾಯಕ ಚುನಾವಣಾಧಿಕಾರಿಗಳು: 6,08 ಅಧಿಕಾರಿ, ಸಿಬ್ಬಂದಿ: 2,70,768, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ: 45,000

ನುಂಗಲಾರದ ಬಿಸಿತುಪ್ಪ: ಸಿಬ್ಬಂದಿ ಕೊರತೆ ತಪ್ಪಿಸುವ ಉದ್ದೇಶದಿಂದ ಆಯಾ ಜಿಲ್ಲಾಡಳಿ ತಗಳು ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಕರೊನಾ ಪರೀಕ್ಷೆ ಕಡ್ಡಾಯ ಮಾಡಿಲ್ಲ. ಸೋಂಕು ಅಥವಾ ಲಕ್ಷಣ ಕಂಡು ಬಂದರೆ ಮಾತ್ರ ಅವರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಇದು ಕೆಲ ಅಧಿಕಾರಿ ಮತ್ತು ಸಿಬ್ಬಂದಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಗ್ರಾಪಂ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಜಿಲ್ಲೆಯ 26 ಸಾವಿರ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯ ಇಲ್ಲ. ಒಂದು ವೇಳೆ ಸಿಬ್ಬಂದಿಯಲ್ಲಿ ಕರೊನಾ ಸೋಂಕು ಲಕ್ಷಣ ಕಂಡು ಬಂದರೆ ಮಾತ್ರ ತಪಾಸಣೆಗೆ ಒಳಪಡಿಸಲಾಗುವುದು. ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಆರೋಗ್ಯದಿಂದ ಇದ್ದು, ಗಟ್ಟಿಮುಟ್ಟಾಗಿದ್ದಾರೆ. ಆ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. | ಎಂ.ಜಿ. ಹಿರೇಮಠ ಜಿಲ್ಲಾ ಚುನಾವಣಾಧಿಕಾರಿ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net