

ಉಡುಪಿ: ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಮರು ಚಿಂತನೆ ಮಾಡಬೇಕು. ಇಲ್ಲದಿದ್ದರೆ ಸಂಘಟನೆಯನ್ನು ಕಾರ್ಯಕರ್ತರಿಗೆ ಒಪ್ಪಿಸಬೇಕು ಎಂದು ಶ್ರೀರಾಮ ಸೇನೆ ವಿಭಾಗಾಧ್ಯಕ್ಷ ಮೋಹನ್ ಭಟ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಅವರಿಗೆ ಸಾಕಷ್ಟು ಗೌರವ ಕೊಡುತ್ತಿದ್ದೇವೆ. ಇತ್ತೀಚಿನ ಬೆಳವಣಿಗೆ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಮೂಡಿಸಿದೆ. ಕಾರ್ಕಳದಲ್ಲಿ ಚುನಾವಣೆ ಸ್ಪರ್ಧೆಯ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಹಠ ಹಿಡಿದು ಸ್ಪರ್ಧಿಸಿ ಚುನಾವಣೆಯಲ್ಲಿ ಸೋತರೆ ಸಂಘಟನೆಗೆ ಬಹಳಷ್ಟು ತೊಂದರೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ಯಾವುದೇ ದೇವಸ್ಥಾನದಲ್ಲಿ ಅಥವಾ ದೈವಸ್ಥಾನದಲ್ಲಿ ಪ್ರಮಾಣಕ್ಕೆ ಸಿದ್ಧ ಎಂದು ಹೇಳಿದರು.
ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ.ವಿ. ಮಾತನಾಡಿ, ಕಾರ್ಕಳ ಅಥವಾ ಪುತ್ತೂರಿನಲ್ಲಿ ಮುತಾಲಿಕ್ ಸ್ಪರ್ಧಿಸಲು ನಿರ್ಧರಿಸಿದರೆ ರಾಜ್ಯ ಬಿಜೆಪಿ ಬೇರೆ ಎಲ್ಲಾದರೂ ಅವಕಾಶ ನೀಡಬಹುದು ಎಂಬ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿತ್ತು. ನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಸಂಘ ಪರಿವಾರದ ಮುಖಂಡರ ಸಭೆಯಲ್ಲಿ ತೆರದಾಳು ಅಥವಾ ಜಮಖಂಡಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗೆ ಮಾತುಕತೆ ನಡೆದಿತ್ತು. ಈ ಮಧ್ಯೆ ಮುತಾಲಿಕ್ ಕಾರ್ಕಳದಿಂದಲೇ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಅಲ್ಲಿನ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಮುತಾಲಿಕ್ ಅವರಿಗೆ ಸುಳ್ಳು ಭರವಸೆಯನ್ನು ನೀಡಿ ಸಂಘಟನೆ ಮತ್ತು ಮುತಾಲಿಕ್ ಅವರನ್ನು ಸಂಪೂರ್ಣ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಚಂದ್ರಕಾಂತ್ ಶೆಟ್ಟಿ, ಸಂದೀಪ್ ಮೂಡುಬೆಟ್ಟು, ಕೀರ್ತಿರಾಜ್, ಶ್ರೀನಿವಾಸ್ ರಾವ್, ಶಾರದಮ್ಮ, ಪ್ರಶಾಂತ್ ಬಂಗೇರ, ರಾಘವೇಂದ್ರ ಕೆಸವೆ ಉಪಸ್ಥಿತರಿದ್ದರು.