ಅನಧಿಕೃತ ಮದ್ಯದಂಗಡಿ ಮೇಲೆ ನಿಗಾವಹಿಸಿ: ಚುನಾವಣಾ ವೆಚ್ಚ ವೀಕ್ಷಕ ಗೌರಿಶಂಕರ್‌ಸಿಂಗ್ ಸೂಚನೆ

Election Meeting
Published on

ಮಂಡ್ಯ: ಗ್ರಾಮೀಣ ಭಾಗದಲ್ಲಿ ಅನಧಿಕೃತ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದಲ್ಲಿ ತುರ್ತಾಗಿ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಮದ್ದೂರು ಚುನಾವಣಾ ವೆಚ್ಚ ವೀಕ್ಷಕ ಗೌರಿಶಂಕರ್‌ಸಿಂಗ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಎಂದರು.

ಬ್ಯಾಂಕ್‌ಗಳಲ್ಲಿ ಸಂಶಯಾಸ್ಪದವಾಗಿ ಹಣದ ವಹಿವಾಟು ನಡೆಯುವುದರ ಬಗ್ಗೆ ಗಮನಹರಿಸಬೇಕು. ಅಂತೆಯೇ ಫೋನ್ ಪೇ, ಗೂಗಲ್ ಪೇ ಮೂಲಕ ಹಣದ ವರ್ಗಾವಣೆ ನಡೆದಲ್ಲಿ, ಅದರ ವಿವರ ಕೊಡಬೇಕು. ಪ್ರಮುಖವಾಗಿ ಒಂದೇ ಮೊತ್ತದ ದೊಡ್ಡ ಸಂಖ್ಯೆಯಲ್ಲಿ ಡಿ.ಡಿ ಯನ್ನು ಪಡೆಯುವ ಸಂಬಂಧ ಪ್ರತಿದಿನ ವರದಿ ನೀಡಬೇಕು ಎಂದು ಸೂಚನೆ ನೀಡಿದರು.

ಮೇಲುಕೋಟೆ ಕ್ಷೇತ್ರದ ವೀಕ್ಷಕ ಅಮಿತ್ವ ಬ್ಯಾನರ್ಜಿ ಮಾತನಾಡಿ, ಪಿಎಸ್‌ಎಸ್ ಸಕ್ಕರೆ ಕಾರ್ಖಾನೆ, ಹೊಳಲು ಬಳಿ ಇರುವ ಚೆಕ್ ಫೋಸ್ಟ್ ಗಳಲ್ಲಿ  ಹೆಚ್ಚಿನ ಸಿಬ್ಬಂದಿ ಬೇಕಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಚುನಾವಣಾಧಿಕಾರಿಗೆ ತಿಳಿಸಿದರು.

ಮದ್ದೂರು ಮತ್ತು ಮಳವಳ್ಳಿ ಸಾಮಾನ್ಯ ವೀಕ್ಷಕ ಅಮಿತ್‌ಕುಮಾರ್ ಮಾತನಾಡಿ, ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಪ್ರವೇಶಿಸಲು ಹಾಗೂ ನಿರ್ಗಮಿಸಲು ಒಂದೇ ದ್ವಾರವಿದ್ದು, ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ವೆಚ್ಚ ವೀಕ್ಷಕ ಕೇದುಪ್ ಬುಟಿಯಾ ಮಾತನಾಡಿ, ಪ್ರತಿದಿನ ರಾಜಕೀಯ ಪಕ್ಷಗಳು ನಡೆಸುವ ಪ್ರಚಾರ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ವಾಹನ ಹಾಗೂ ಇನ್ನಿತರೆ ವಸ್ತುಗಳಿಗೆ ಪಡೆದಿರುವ ಅನುಮತಿಯ ವಿವರಗಳನ್ನು ವೆಚ್ಚ ವೀಕ್ಷಣಾ ತಂಡಕ್ಕೆ ಒದಗಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಜಿಲ್ಲೆಯಲ್ಲಿ ಚುನಾವಣಾ ಕೆಲಸಗಳಿಗೆ ಮಾಡಲಾಗಿರುವ ವಿವಿಧ ತಂಡ ಹಾಗೂ ಸಿದ್ಧತೆ, ಅಂತೆಮತ ಮತ್ತು ಮತ ಎಣಿಕೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಪೊಲೀಸ್ ವೀಕ್ಷಕ ಅವಿನಾಶ್‌ಕುಮಾರ್, ವೆಚ್ಚ ವೀಕ್ಷಕರಾದ ಲೋಕೇಶ್‌ದಾಮೋರ್, ಪ್ರಸನ್ನದತ್ತ, ಪ್ರದೀಪ್‌ಕುಮಾರ್, ಸಾಮಾನ್ಯ ವೀಕ್ಷಕರಾದ ಸುರೇಶ್‌ಕುಮಾರ್, ತನ್ಮಯ್ ಚಕ್ರಬರ್ತಿ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net