

ಮಂಡ್ಯ: ಜಿಲ್ಲೆಯಲ್ಲಿ ಒಟ್ಟು 12,674 ಜನರು ಅಂಚೆ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದು, ಈ ಪೈಕಿ 10,075 ಜನರು ಮತ ಹಾಕಿದ್ದಾರೆ. 80 ವರ್ಷ ಮೇಲ್ಪಟ್ಟ 2603 ಜನರು ಮನೆಯಿಂದಲೇ ಮತದಾನಕ್ಕೆ ಅವಕಾಶ ಪಡೆದಿದ್ದರು. ಈ ಪೈಕಿ 2502 ಜನರು ಮತದಾನ ಮಾಡಿದ್ದಾರೆ. ಅಂತೆಯೆ 91 ಜನರು ನಿಧನರಾಗಿದ್ದು, ಉಳಿದವರು ಮತ ಹಾಕಿಲ್ಲ. ಅಂತೆಯೆ 778 ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ 759 ಜನರು ಮತ ಹಾಕಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.
ಅಗತ್ಯ ಸೇವೆ ಸಲ್ಲಿಸುತ್ತಿರುವ 239 ಜನರ ಪೈಕಿ 188 ಜನರು, ಪೋಲಿಂಗ್ ಕರ್ತವ್ಯದಲ್ಲಿರುವ 9027 ಅಧಿಕಾರಿ, ಸಿಬ್ಬಂದಿ ಪೈಕಿ 6626 ಜನರು ಮತ ಚಲಾಯಿಸಿದ್ದಾರೆ. ಇನ್ನು ಅಂಚೆ ಪತ್ರದ ಮೂಲಕ ಮತದಾನ ಮಾಡಿರದ ಪೋಲಿಂಗ್ ಸಿಬ್ಬಂದಿಗೆ ಮೇ 9ರಂದು ತಾಲೂಕು ಮಸ್ಟರಿಂಗ್ ಕೇಂದ್ರದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಮತದಾನ ಮಾಡಲು ಜಿಲ್ಲಾಡಳಿತ, ಸ್ವೀಪ್ ವತಿಯಿಂದ ಪ್ರತಿ ಕುಟುಂಬಕ್ಕೆ ಕರಪತ್ರ ನೀಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆಕ್ಟರ್ ಮ್ಯಾಜಿಸ್ಟ್ರೇಟ್, ಎಎಸ್‌ಟಿ ಮತ್ತು ಎಫ್‌ಎಸ್‌ಸಿ ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಚೆಕ್‌ಪೋಸ್ಟ್, ವಿವಿಧ ತಂಡ ಹಾಗೂ ಮತಗಟ್ಟೆಗಳಿಗೆ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇ 8ರ ಸಂಜೆ 5 ಗಂಟೆಯಿಂದ 11ರ ಬೆಳಗ್ಗೆ 10 ಗಂಟೆವರೆಗೆ ಹಾಗೂ ಮತ ಎಣಿಕೆಯಂದು 13ರಂದು ಬೆಳಗ್ಗೆ 6 ಗಂಟೆಯಿಂದ 14ರ ಬೆಳಗ್ಗೆ 10 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತದಾನದ ದಿನವಾದ ಮೇ 10ರಂದು ಜಿಲ್ಲಾದ್ಯಂತ ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ. ಅಂತೆಯೆ 8ರಂದು ಸಂಜೆ 6 ಗಂಟೆಯಿಂದ 11ರ ಬೆಳಗ್ಗೆ 6 ಗಂಟೆವರೆಗೆ ಸಿಆರ್‌ಪಿಸಿ 1970ರ ಕಲಂ 144ರ ರೀತ್ಯಾ ಷರತ್ತು ವಿಧಿಸಿ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ. ಈ ಆದೇಶವು ಅಭ್ಯರ್ಥಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸುವುದಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂದರು.