

ಮಂಡ್ಯ: ಯಾವ ಸರ್ಕಾರ ಅಥವಾ ರಾಜಕಾರಣಿಗಳಾದರೂ ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡುತ್ತಾರೆ. ಆದರೆ ಚುನಾವಣೆ ವಿಷಯಕ್ಕೆ ಬಂದಾಗ ಪುರುಷರಿಗಷ್ಟೇ ಆದ್ಯತೆ. ಇದು ವಿಧಾನಸಭಾ ಚುನಾವಣೆಯಲ್ಲಿಯೂ ಮತ್ತೆ ಗೋಚರಿಸುವ ಸಾಧ್ಯತೆ ಇದೆ. ಅಂದರೆ ಯಾವ ಪಕ್ಷಗಳು ಮಹಿಳೆಯರಿಗೆ ಅವಕಾಶ ಕೊಡಲು ಸಿದ್ಧರಿಲ್ಲ ಎನ್ನುವುದು ಕಟುಸತ್ಯ.
ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಸರ್ವೋದಯ ಪಕ್ಷ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದರೆ ಯಾವ ಪಕ್ಷದಲ್ಲಿಯೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತೇ ಇಲ್ಲ. ಅದರಂತೆ ಪಕ್ಷದ ಹೈಕಮಾಂಡ್ ಕೂಡ ಮಹಿಳಾ ಅಭ್ಯರ್ಥಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ಮಹಿಳಾ ಆಕಾಂಕ್ಷಿತರು ಕೂಡ ‘ಬಡವನ ಕೋಪ ದವಡೆಗೆ ಮೂಲ’ ಪಕ್ಷದಲ್ಲಿ ತಮ್ಮ ಪಾಡಿಗಿದ್ದಾರೆ. ಈ ಎಲ್ಲದರ ನಡುವೆ ಜಿಲ್ಲೆಯಲ್ಲಿ ಶಾಸಕಿಯರಾಗಿ ಆಯ್ಕೆಯಾಗಿ ಆಡಳಿತದ ನಡೆಸಿದ ಹಲವು ಮಹಿಳೆಯರಿದ್ದಾರೆ.
ಸಕ್ಕರೆನಾಡಲ್ಲಿ ಮಹಿಳಾ ದರ್ಬಾರ್: ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ತಮ್ಮ ಖದರ್ ತೋರಿಸಿದ ಮಹಿಳೆಯರ ಸಂಖ್ಯೆ ಕಡಿಮೆ ಏನಿಲ್ಲ. ಅದರಲ್ಲೂ ಶ್ರೀರಂಗಪಟ್ಟಣ ಕ್ಷೇತ್ರದಿಂದ ಮೂರು ಮಹಿಳೆಯರು ವಿಧಾನಸಭೆ ಪ್ರವೇಶಿಸಿರುವುದು ಜಿಲ್ಲೆಯ ಮಟ್ಟಿಗೆ ದಾಖಲೆ. ಈವರೆಗೆ ಹಲವು ವಿಧಾನಸಭಾ ಚುನಾವಣೆ ನಡೆದಿವೆ. ಇದರಲ್ಲಿ ಬೇರೆ ಬೇರೆ ಕ್ಷೇತ್ರದಿಂದ ಎಂಟು ಮಹಿಳೆಯರು ಜಯಗಳಿಸಿದ್ದಾರೆ. ಇನ್ನು ಉಳಿದಂತೆ ಮೂರು ಕ್ಷೇತ್ರಗಳಲ್ಲಿ ಮಹಿಳೆಯರು ಖಾತೆ ತೆರೆದಿಲ್ಲ. ಆದರೆ, ಇದರ ನಡುವೆ ಎಂಟು ಮಹಿಳಾ ಶಾಸಕರ ಪೈಕಿ ಒಬ್ಬರೂ ಸಚಿವರಾಗಿಲ್ಲ ಎನ್ನುವುದೇ ಗಮನಾರ್ಹ ಸಂಗತಿ.
ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಮಟ್ಟಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಹೆಚ್ಚು ಮಹಿಳೆಯರು ಶಾಸಕಯರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಆಯ್ಕೆಯಾಗಿರುವುದು ವಿಶೇಷ. ಪುರುಷರೇ ಸ್ಪರ್ಧಿಸಿ ಜಯಗಳಿಸುತ್ತಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಂದರೆ 1972ರಲ್ಲಿ ದಮಮಂತಿ ಬೋರೇಗೌಡ 7,139 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ನಂತರ 1986ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1989ರಲ್ಲಿ ದಮಯಂತಿ ಬೋರೇಗೌಡ, 1994ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಶಾಸಕಿಯಾಗಿ ಆಯ್ಕೆಯಾಗಿದ್ದು ಇತಿಹಾಸ.
ಇನ್ನು ಮದ್ದೂರು ವಿಧಾನಸಭಾ ಕ್ಷೇತ್ರದಿಂದ 1984ರಲ್ಲಿ ಜಯವಾಣಿ ಮಂಚೇಗೌಡ, 2009ರಲ್ಲಿ ಕಲ್ಪನಾ ಸಿದ್ದರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 1997ರಲ್ಲಿ ಪ್ರಭಾವತಿ ಜಯರಾಂ, ಮಳವಳ್ಳಿ ಕ್ಷೇತ್ರದಿಂದ 1989ರಲ್ಲಿ ಮಲ್ಲಾಜಮ್ಮ ಹಾಗೂ ಈ ಹಿಂದೆ ಅಸ್ಥಿತ್ವದಲ್ಲಿದ್ದ ಕಿರುಗಾವಲು ಕ್ಷೇತ್ರದಿಂದ 2004ರಲ್ಲಿ ಎಂ.ಕೆ.ನಾಗಮಣಿ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಶಾಸಕಿಯರಾಗದ ಕ್ಷೇತ್ರ: ಜಿಲ್ಲೆಯ ಐದು ವಿಧಾನಸಭಾ(ಕಿರುಗಾವಲು ಸೇರಿದಂತೆ) ಕ್ಷೇತ್ರದಿಂದ ಎಂಟು ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಿರುವುದು ಒಂದೆಡೆಯಾದರೆ, ಮೇಲುಕೋಟೆ ಮತ್ತು ಕೆ.ಆರ್.ಪೇಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮಹಿಳೆಯರು ಶಾಸಕಿಯರಾಗಿಲ್ಲ.
ಜಿಲ್ಲೆಯಿಂದ ಎಂಟು ಶಾಸಕಿಯರು ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದರೂ, ಯಾರೊಬ್ಬರೂ ಸಚಿವ ಹುದ್ದೆ ಅಲಂಕರಿಸಿಲ್ಲ ಎನ್ನುವುದು ಗಮನಾರ್ಹ. ಆದರೆ, 1994ರಲ್ಲಿ ಶಾಸಕಿಯಾಗಿ ಆಯ್ಕೆಯಾದ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಅವರು ಜೆ.ಎಚ್.ಪಟೇಲರ ಸರ್ಕಾರದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಳವಳ್ಳಿ ಕ್ಷೇತ್ರದ ಮಲ್ಲಾಜಮ್ಮ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ.
ಚುನಾವಣಾ ಆಕಾಂಕ್ಷಿತರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬೆರಳೆಣಿಕೆಯಷ್ಟು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲು ಮಹಿಳೆಯರ ಹೆಸರು ಕೇಳಿಬರುತ್ತಿದೆ. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಮನ್‌ಮುಲ್ ನಿರ್ದೇಶಕಿ ರೂಪಾ ಮತ್ತು ಯಾವ ಕ್ಷೇತ್ರದಿಂದಾದರೂ ಬಿಜೆಪಿಯಿಂದ ಅವಕಾಶ ಕೇಳುತ್ತಿರುವ ಪ್ರೇಮಾ ಯುವರಾಜ್, ಕೆ.ಆರ್.ಪೇಟೆ ಕ್ಷೇತ್ರದಿಂದ ತಾಪಂ ಮಾಜಿ ಸದಸ್ಯ ಮೀನಾಕ್ಷಿ ಹೆಸರು ಕೇಳಿಬಂದಿತ್ತು. ಇತ್ತ ಮಂಡ್ಯ ಕ್ಷೇತ್ರದಿಂದ ಆಕಾಂಕ್ಷಿತರಾಗಿದ್ದ ಲಕ್ಷ್ಮೀ ಅಶ್ವಿನ್‌ಗೌಡ ಹೆಸರು ಬಂದಿತ್ತಾದರೂ ನಂತರದ ದಿನಗಳಲ್ಲಿ ಮರೆಯಾಯಿತು. ಕಾಂಗ್ರೆಸ್‌ನಿಂದ ಮಳವಳ್ಳಿ ಕ್ಷೇತ್ರದಿಂದ ಮಲ್ಲಾಜಮ್ಮ ಆಕಾಂಕ್ಷಿತರಾಗಿದ್ದರೂ ಅವಕಾಶ ಸಿಕ್ಕಿಲ್ಲ. ಮಂಡ್ಯದಿಂದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ರೇಸ್‌ನಲ್ಲಿದ್ದಾರೆ. ಇನ್ನು ಸಂಸದೆ ಸುಮಲತಾ ರಾಜ್ಯ ರಾಜಕಾರಣ ಬರುವ ಮಾತುಗಳಿದ್ದು, ವಿಧಾನಸಭಾ ಚುನಾವಣೆಗೆ ಮಂಡ್ಯ ಅಥವಾ ಮದ್ದೂರಿನಿಂದ ಸ್ಪರ್ಧೆ ಮಾಡಬಹುದೆನ್ನುವ ಸುದ್ದಿ ಹಲವು ದಿನದಿಂದ ಹರಿದಾಡುತ್ತಿದೆ. ಸದ್ಯಕ್ಕೆ ಜೆಡಿಎಸ್‌ನಿಂದ ಏಳು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್‌ನಿಂದ ನಾಲ್ಕು ಕ್ಷೇತ್ರ ಹಾಗೂ ಬಿಜೆಪಿಯಿಂದ ಏಳು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಬೇಕಿದೆ.