

ವೇಮಗಲ್: ವೇಮಗಲ್&-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ಗಳ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯ ಚುನಾವಣೆ ಆಯೋಗ ಸಿದ್ಧತೆ ಕೈಗೊಳ್ಳಲು ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು, ಯಾವುದೇ ಕ್ಷಣದಲ್ಲಿಯಾದರೂ ದಿನಾಂಕ ಘೋಷಣೆಯಾಗುವ ಸಾಧ್ಯತೆ ಹೆಚ್ಚಿವೆ.
ಚುನಾವಣೆ ಯಾವಾಗ ಎಂಬ ಕಾತುರದಲ್ಲಿದ್ದ ಸ್ಥಳಿಯ ರಾಜಕೀಯ ಪಕ್ಷಗಳ ಮುಖಂಡರೀಗ ಆಕಾಂಗಳು ಹಾಗೂ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಮುಂದಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೊಸದಾಗಿ ರಚನೆಯಾಗಿರುವ ನಗರ ಸ್ಥಳಿಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವ ರಾಜ್ಯ ಚುನಾವಣಾ ಆಯೋಗ, ವೇಮಗಲ್&-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಸಿದ್ಧತೆಗೂ ಕೋಲಾರದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮತದಾರರ ಪಟ್ಟಿ ತಯಾರಿಕೆಗೆ ಆಯೋಗದಿಂದ ಪ್ರತ್ಯೇಕ ನಿರ್ದೇಶನ ನೀಡಲಿದೆ. ಉಳಿದಂತೆ ಮತದಾನ ಕೇಂದ್ರಗಳ ಭೌತಿಕ ಪರಿಶೀಲನೆ ನಡೆಸಿ ಕೇಂದ್ರಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೂಡಲೇ ಅಂಕಿ& ಅಂಶಗಳೊಂದಿಗೆ ಮತದಾನ ಕೇಂದ್ರಗಳ ಪಟ್ಟಿಯ ವಿವರವನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಚುನಾವಣೆ ನಡೆಯುವ ವಾರ್ಡ್ಗಳ ಮತಗಟ್ಟೆಗಳ ಅನುಸಾರ ಮತದಾನ ಸಿಬ್ಬಂದಿ ನೇಮಕ ಮತ್ತು ಅವರಿಗೆ ತರಬೇತಿ ನೀಡಲು ಅಗತ್ಯ ಕ್ರಮವಹಿಸಲು ಆಯೋಗ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದೆ. ಚುನಾವಣೆಗೆ ಅಗತ್ಯವಾದ ಎಲೆಕ್ಟ್ರಾನಿಕ್ ಮತಯಂತ್ರಗಳ ಸಂಗ್ರಹಣೆಗೆ ಸೂಚಿಸಿರುವ ಆಯೋಗ, ಯಂತ್ರಗಳು ಜಿಲ್ಲೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ಆಯೋಗಕ್ಕೆ ಮಾಹಿತಿ ಒದಗಿಸಿ ಅಗತ್ಯವಿದ್ದಲ್ಲಿ ಇತರೆ ಜಿಲ್ಲೆಗಳಿಂದ ಎರವಲು ಪಡೆಯುವಂತೆ ತಿಳಿಸಿದೆ.
10 ವಾರ್ಡ್ಗಳಿಗೆ ಚುನಾವಣಾಧಿಕಾರಿ
ಪ್ರತಿ 10 ವಾರ್ಡ್ಗಳಿಗೆ ಒಬ್ಬರಂತೆ ತಹಸೀಲ್ದಾರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲು ಆಯೋಗ ಸೂಚಿಸಿದ್ದು, ಜತೆಗೆ ಒಬ್ಬ ಸಹಾಯಕ ಚುನಾವಣಾಧಿಕಾರಿಯನ್ನು ನೇಮಕ ಮಾಡಲು ಕೂಡಲೇ ಪಟ್ಟಿ ತಯಾರಿಸಿ ಆಯೋಗದ ಅನುಮೋದನೆಗೆ ಸಲ್ಲಿಸಲು ಸೂಚಿಸಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ವಿವರಗಳನ್ನು ಚುನಾವಣಾಧಿಕಾರಿಗಳ ಮೂಲಕ ಆಯೋಗಕ್ಕೆ ಸಲ್ಲಿಸಬೇಕು. ಅಭ್ಯರ್ಥಿಗಳ ಚುನಾವಣೆ ವೆಚ್ಚಗಳನ್ನು ಪರಿಶೀಲಿಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡಗಳನ್ನು ರಚಿಸಬೇಕು ಎಂದು ತಿಳಿಸಲಾಗಿದೆ. ಚುನಾವಣೆ ಕಾರ್ಯಕ್ಕೆ ಅಗತ್ಯವಾದ ಪತ್ರ,ನಮೂನೆಗಳು, ಲಕೋಟೆ, ಸೀಲಿಂಗ್, ವ್ಯಾಕ್ಸ್, ಇಂಡೆಲಿಬಲ್, ಇಂಕ್ ಇತ್ಯಾದಿ ಮಾಹಿತಿಯನ್ನು ವಾರದೊಳಗೆ ಆಯೋಗಕ್ಕೆ ವರದಿ ಸಲ್ಲಿಸಲು ಸೂಚನೆ ಬಂದಿದೆ.