ಆಮಿಷಕ್ಕೆ ಒಳಗಾಗದೇ ಯೋಗ್ಯರನ್ನು ಆರಿಸಿ: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಸಲಹೆ

Vichara Sankirna)
Published on

ಮಂಡ್ಯ: ಇತ್ತೀಚಿನ ವರ್ಷಗಳಲ್ಲಿ ಹಣ, ಜಾತಿ ಮತ್ತು ತೋಳ್ಬಲ, ಅನೈತಿಕತೆ, ಅಪಮೌಲ್ಯಗಳು ಚುನಾವಣೆಯಲ್ಲಿ ವಿಜೃಂಭಿಸುತ್ತಿವೆ. ಹಿಂದೆ ನಮ್ಮನ್ನಾಳುವವರು ಅರಮನೆಯಲ್ಲಿ ಹುಟ್ಟುತ್ತಿದ್ದರು. ಈಗ ಮತಪೆಟ್ಟಿಗೆಗಳಲ್ಲಿ ಹುಟ್ಟಿ ಬರುತ್ತಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಮತಗಟ್ಟೆಯಲ್ಲಿ ಹುಟ್ಟಿ ಬರುವ ಜನಪ್ರತಿನಿಧಿಗಳು ನಿಸ್ವಾರ್ಥ, ಸೇವಾಮನೋಭಾವದಿಂದ ಕೆಲಸ ಮಾಡುವವರಾಗಿರಬೇಕಿದೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸ್ವರಚಿತ ‘ಎಚ್ಚೆತ್ತ ಮತದಾರ ಪ್ರಜಾತಂತ್ರಕ್ಕಾಧಾರ ಕಿರು ಪುಸ್ತಕ ಬಿಡುಗಡೆಗೊಳಿಸಿ ಹಾಗೂ ವಿಚಾರ ಸಂಕಿರಣ’ದಲ್ಲಿ ಮಾತನಾಡಿದರು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಗೆ ಮತದಾನ ಮಾತನಾಡಬೇಕು. ಮತಕ್ಕೆ ಹಣ ಕೊಡುವವರೆಲ್ಲರೂ ಭ್ರಷ್ಟರೇ ಆಗಿರುತ್ತಾರೆ. ಆದ್ದರಿಂದ ಹಣ, ಮದ್ಯ, ಉಡುಗೊರೆಗಳನ್ನು ನೀಡದೆ ಪ್ರಾಮಾಣಿಕ ವ್ಯಕ್ತಿಗಳನ್ನು ಚುನಾಯಿಸಬೇಕು. ಜತೆಗೆ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕರೆ ನೀಡಿದರು.

ಈಗ ನನಗೆ 73 ವರ್ಷ ವಯಸ್ಸಾಗಿದೆ. ನಾನು 20 ವರ್ಷದ ಯುವಕನಾಗಿದ್ದಾಗಿನಿಂದ ಹತ್ತಾರು ಚುನಾವಣೆಗಳನ್ನು ನೋಡಿದ್ದೇನೆ. 1970ರ ದಶಕದಲ್ಲಿ ಜನರನ್ನು ವಾಹನಗಳಲ್ಲಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಿದ್ದರು. ನಂತರ ಮತಗಟ್ಟೆಗೆ ಬರಲಾಗದ ವಯಸ್ಸಾದ, ಅಂಗವಿಕಲರನ್ನು ಕರೆತರಲು ಕೂಲಿಯಾಳುಗಳನ್ನು ನೇಮಿಸಲಾಯಿತು. ಈಗ ಹಣ ಕೊಟ್ಟು ಮತದಾರರನ್ನು ಕರೆಸುತ್ತಿದ್ದಾರೆ. ಹೀಗೆ ಚುನಾವಣೆಯಲ್ಲಿ ಅನಾರೋಗ್ಯಕರ ಬದಲಾವಣೆಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭ್ಯರ್ಥಿಯ ಜಾತಿ, ಆತನ ಪ್ರಾದೇಶಿಕತೆ ಹಾಗೂ ಕೊಡುವ ಆಮಿಷಗಳು ಪ್ರಸ್ತುತ ಜನಪ್ರತಿನಿಧಿಗಳ ಆಯ್ಕೆ ಮಾನದಂಡಗಳಾಗಿವೆ. ಆದ್ದರಿಂದ ಜಾತಿವಾದಿಗಳು, ಭ್ರಷ್ಟಾಚಾರಿಗಳು, ಅಪರಾಧಿಕ ಹಿನ್ನಲೆಯುಳ್ಳವರೇ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. 2013ರಲ್ಲಿ ಸುಪ್ರೀಂಕೋರ್ಟ್ ಬಿಡುಗಡೆ ಮಾಡಿದ ಪಟ್ಟಿಯಂತೆ ದಶಕದ ಹಿಂದೆಯೇ ಆಯ್ಕೆಯಾಗುತ್ತಿದ್ದ ಒಟ್ಟು ಜನಪ್ರತಿನಿಧಿಗಳಲ್ಲಿ ಶೇ.30ರಷ್ಟು ಜನ ಅಪರಾಧಿಕ ಹಿನ್ನಲೆಯುಳ್ಳವರಾಗಿದ್ದರು. ಅವರಲ್ಲಿ ಶೇ.14ರಷ್ಟು ಜನ ಗಂಭೀರ ಸ್ವರೂಪದ ಆರೋಪ ಹೊತ್ತವರು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದವರಾಗಿದ್ದರು. ಇಂತಹ ಬೆಳವಣಿಗೆಗಳಿಗೆ ಮತದಾರರು ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ನಮ್ಮ ತಪ್ಪು ಆಯ್ಕೆಯಿಂದ ಭ್ರಷ್ಟ ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ನಾವೇ ಸಿಲುಕುತ್ತೇವೆ. ಆದ್ದರಿಂದ ನಾವು ಸಭ್ಯ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಯಾರೂ ಇಷ್ಟವಿಲ್ಲದ್ದಿರೆ ನೋಟಾಗೆ ಮತ ಹಾಕಿ. ನೋಟಾ ಮತಗಳೇ ಹೆಚ್ಚಾದರೆ ಈ ಬಗ್ಗೆ ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ, ಮಾನದಂಡ ನಿಗದಿಪಡಿಸುತ್ತದೆ. ಯಾವ ಆಮಿಷ, ಮರ್ಜಿಗೂ ಒಳಗಾಗದ 18ರಿಂದ 22 ವರ್ಷದ ಯುವಜನರು ಮತದಾನದ ವಿಷಯದಲ್ಲಿ ಸ್ವತಂತ್ರರಾಗಿದ್ದಾರೆ. ಅಂತಹವರು ಮೊದಲು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಅಪಮೌಲ್ಯಗಳೇ ನಮ್ಮನ್ನು ಆಳುತ್ತವೆ ಎಂದು ಎಚ್ಚರಿಸಿದರು.

ಸಂವಾದದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ವಕೀಲ ಎಂ.ಗುರುಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net