ಹರಪನಹಳ್ಳಿ ಪುರಸಭೆಗೆ ಸೆ.2ರಂದು ಚುನಾವಣೆ

Harapanahalli Munsipalty
ಹರಪನಹಳ್ಳಿ ಪುರಸಭೆ ಕಚೇರಿ ಹೊರನೋಟ.
Published on

ಹರಪನಹಳ್ಳಿ: ಮೀಸಲಾತಿ ವಿಚಾರವಾಗಿ ಧಾರವಾಡ ಹೈಕೋರ್ಟ್ ಪೀಠಕ್ಕೆ ಸಲ್ಲಿಸಿದ್ದ ರಿಟ್ ಅರ್ಜಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸೆ.2ರಂದು ಚುನಾವಣೆ ನಿಗದಿಯಾಗಿದೆ.

ಇದೇ 21ರಂದು ಚುನಾವಣೆ ನಿಗದಿಯಾಗಿತ್ತು. ಶಾಸಕರು, ಸಂಸದರು ಸೇರಿ ಪುರಸಭೆ ಸದಸ್ಯರು ಕಚೇರಿಗೆ ಆಗಮಿಸಿದ್ದರು. ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ 20ನೇ ವಾರ್ಡ್ ಸದಸ್ಯೆ ಎಂ.ಫಾತಿಮಾಬೀ ಹಾಗೂ ಬಿಜೆಪಿಯಿಂದ 19ನೇ ವಾರ್ಡ್‌ನ ಕೌಟಿ ಸುಮಾ ವಾಗೀಶ್ ನಾಮಪತ್ರ ಸಲ್ಲಿಸಿದ್ದರು.

ಎಸ್ಸಿ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ 21ನೇ ವಾರ್ಡ್‌ನ ಕಾಂಗ್ರೆಸ್ ಎಚ್.ಕೊಟ್ರೇಶ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಸದಸ್ಯ ಟಿ.ವೆಂಕಟೇಶ್ ಅವರು ಹೈಕೋರ್ಟ್ ಪೀಠದಿಂದ ತಡೆಯಾಜ್ಞೆ ತಂದ ಆದೇಶದ ಪ್ರತಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಮುಂದೂಡಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಆದೇಶ ಹೊರಡಿಸಿದ್ದರು.

ಇದೀಗ ಟಿ.ವೆಂಕಟೇಶ್ ಅವರು ಅರ್ಜಿ ವಾಪಸ್ ಪಡೆದಿದ್ದರಿಂದ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ. ಸೆ.2ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮರು ನಿಗದಿಪಡಿಸಿದ್ದು, ಎಲ್ಲ ಸದಸ್ಯರಿಗೆ ನೋಟಿಸ್ ನೀಡಲಾಗಿದೆ.

ಒಟ್ಟು 29 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 19, ಬಿಜೆಪಿ 10 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್‌ಗೆ ಅಧಿಕಾರ ಒಲಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net