

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ನಿಯೋಜಿಸಿರುವ ಸಾಮಾನ್ಯ ವೀಕ್ಷಕರಾದ ಜಿ.ಎಸ್.ಪಾಂಡಾ ದಾಸ್ ಅವರು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನಿಯಂತ್ರಣ ಘಟಕಕ್ಕೆ ಶನಿವಾರ ರಂದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಯಂತ್ರಣ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಅತೀ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಚೆಕ್ ಪೋಸ್ಟಗಳ ಮೇಲೆ ನಿರಂತರವಾಗಿ ನಿಗಾವಹಿಸಬೇಕು. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರವಾಗಿ ನಿಗಾವಹಿಸುವದರ ಜತೆಗೆ ಚುನಾವಣೆಗೆ ಸಂಬಂಧಿಸಿದ ದೂರು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ಅವರು ನಿಯಂತ್ರಣ ಘಟಕದಲ್ಲಿನ ಕಾರ್ಯ ನಿರ್ವಹಿಸುತ್ತಿರುವ ಚೆಕ್ ಪೋಸ್ಟ್ ಗಳ ನಿಯಂತ್ರಣ, ಮಾಧ್ಯಮ ಕಣ್ಗಾವಲು ಘಟಕದ ಕಾರ್ಯ ವೈಖರಿಯ ಬಗ್ಗೆ ವೀಕ್ಷಕ ಜಿ.ಎಸ್. ಪಾಂಡಾ ದಾಸ್ ಅವರಿಗೆ ವಿವರಿಸಿದರು.