

ಕಂಪ್ಲಿ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಮೂವರು ಸದಸ್ಯರನ್ನು ಗೈರಾಗಿಸಿ ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಪಡೆದಿದೆ ಎಂದು ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಆರೋಪಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿ 13 ಸದಸ್ಯರ ಬಹುಮತ ಹೊಂದಿದ್ದರಿಂದ ಪಕ್ಷದ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ ಟಿ.ವಿ.ಸುದರ್ಶನರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಹೇಮಾವತಿ ನಾಮಪತ್ರ ಸಲ್ಲಿಸಿದ್ದರು. ಆದರೆ ಶಾಸಕ, ಸಂಸದ, ಸರ್ಕಾರ ಹಣ ಕೊಟ್ಟು ಬಿಜೆಪಿಯ ಮೂವರು ಸದಸ್ಯೆಯರನ್ನು ಖರೀದಿ ಮಾಡಿ ಚುನಾವಣೆಯಲ್ಲಿ ಗೈರಾಗುವಂತೆ ಮಾಡಿದ್ದಾರೆಂದು ಆರೋಪಿಸಿದರು.
ಮೂರು ದಿನಗಳ ಹಿಂದೆ ಬಿಜೆಪಿಯ 13 ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ಗೈರಾದ ನಿರ್ಮಲಾ, ಪಾರ್ವತಿ, ಗಂಗಮ್ಮ ಅವರ ಸದಸ್ಯತ್ವ ಅನರ್ಹಗೊಳಿಸಲು ಡಿಸಿಗೆ ದೂರು ಸಲ್ಲಿಸಲಾಗುವುದು ಎಂದರು.