

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ. ಪ್ರಸನ್ನ ನೀಡಿದ ರಾಜೀ ನಾಮೆಯಿಂದ ತೆರವುಗೊಂಡ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.
ಚುನಾವಣಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಮಧ್ಯಾಹ್ನ 2ಕ್ಕೆ ಕೈ ಎತ್ತುವ ಮೂಲಕ ಮತದಾನ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹಾಗೂ ಶಾಸಕ ಜಿ.ಟಿ. ದೇವೇಗೌಡ ಬಣದ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ರಾಜೀನಾಮೆ ಹಿನ್ನೆಲೆ: ‘ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಉದ್ದೇಶಪೂರ್ವಕವಾಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಅನಗತ್ಯವಾಗಿ 24 ನೋಟಿಸ್‌ಗಳನ್ನು ನೀಡಿದ್ದಾರೆ. ಹೀಗಾಗಿ ಆಡಳಿತ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೇನೆ’ ಎಂದು ಪ್ರಸನ್ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕೆ ಬಹಿರಂಗ ಹೇಳಿಕೆ ನೀಡಿದ್ದರು. ‘ಪ್ರಸನ್ನ ಮಾಡಿದ ಪುಣ್ಯದ ಕೆಲಸಕ್ಕೆ ಸಂಬಂಧಿಸಿದ ಇಲಾಖೆ ನೋಟಿಸ್ ನೀಡಿದೆ, ನೋಟಿಸ್ ನೀಡಲು ನಾನು ಯಾರು’ ಎಂದು ಸಚಿವ ಕೆ.ವೆಂಕಟೇಶ್ ಪ್ರಸ್ನಿಸಿದ್ದರು. ಪ್ರಸನ್ನ ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್ ಅವರ ಪುತ್ರರಾಗಿದ್ದಾರೆ. ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕೆ.ವೆಂಕಟೇಶ್ ಹಾಗೂ ಕೆ. ಮಹದೇವ್ ನಡುವೆ ಪ್ರತಿ ಬಾರಿ ಜಿದ್ದಾಜಿದ್ದಿನ ಹೋರಾಟ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
2021ರಲ್ಲಿ ನಡೆದ ಚುನಾವಣೆ: ಮೈಮುಲ್‌ನ 15 ಸ್ಥಾನಕ್ಕೆ 2021ರಲ್ಲಿ ಚುನಾವಣೆ ನಡೆಯಿತು. ಆ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡಿದ್ದ ಶಾಸಕ ಜಿ.ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆ ಸಂದರ್ಭ ನಡೆದ ಚುನಾವಣೆಯಲ್ಲಿ ಖುದ್ದಾಗಿ ಎಚ್.ಡಿ. ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿ ರಣತಂತ್ರ ರೂಪಿಸಿದರೂ ಜಿ.ಟಿ. ದೇವೇಗೌಡ ಬಣದ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಆ ಸಂದರ್ಭ ಚತುರ ರಾಜಕೀಯ ನಡೆ ಅನುಸರಿಸಿದ ಜಿ.ಟಿ. ದೇವೇಗೌಡ, ಬಿಜೆಪಿ ಹಾಗೂ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮ್ಮ 12 ಬೆಂಬಲಿಗರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಜೆಡಿಎಸ್ ಬೆಂಬಲಿತ ಮೂವರು ಸದಸ್ಯರು ಮಾತ್ರ ಆಯ್ಕೆಗೊಂಡರು.
ಯಾರ ನಡುವೆ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಚೆಲುವರಾಜು, ನಾಮ ನಿರ್ದೇಶಿತ ಸದಸ್ಯ ಬಿ.ಗುರುಸ್ವಾಮಿ, ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣಕ್ಕೆ ಸೇರಿದ ಬಿ.ಎನ್.ಸದಾನಂದ, ಕೆ.ಈರೇಗೌಡ, ಕೆ.ಎಸ್.ಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಜಿ.ಟಿ. ದೇವೇಗೌಡ ಬಣದಿಂದ ಕೆ.ಈರೇಗೌಡ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಬೆಂಬಲಿತರಾದ ಚೆಲುವರಾಜು ಅಥವಾ ಬಿ. ಗುರುಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಮೈಮುಲ್‌ನಲ್ಲಿ ಒಟ್ಟು 21 ಸದಸ್ಯರು ಇದ್ದಾರೆ. ನಾಮ ನಿರ್ದೇಶಿತ ಸದಸ್ಯರ ನೇಮಕದಿಂದ ಸದ್ಯದ ಮಟ್ಟಿಗೆ ಕಾಂಗ್ರೆಸ್ ಬಣ ಸಂಖ್ಯಾಬಲ ಹೊಂದಿದ್ದರೂ ಚುನಾವಣೆಯ ಅಂತಿಮ ಕ್ಷಣದಲ್ಲಿ ಯಾವುದೇ ಬಣದವರು ಆಯ್ಕೆಯಾದರೂ ಅಚ್ಚರಿ ಇಲ್ಲ. ಒಟ್ಟು 21 ಸದಸ್ಯರ ಪೈಕಿ 11 ಸದಸ್ಯರ ಸಂಖ್ಯಾಬಲವನ್ನು ಕಾಂಗ್ರೆಸ್ ಬಣ ಹೊಂದಿದ್ದು, ಜಿ.ಟಿ. ದೇವೇಗೌಡ ಬಣ 10 ಸದಸ್ಯರ ಬಲ ಹೊಂದಿದೆ.
ಮೈಮುಲ್ ಜಿಲ್ಲೆಯ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನದ ಹುದ್ದೆ ಸಹಜವಾಗಿ ಪೈಪೋಟಿ ಹೆಚ್ಚಾಗಿದೆ. ಕಳೆದ ಮೂರು ದಶಕಗಳಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಮೈಮುಲ್ನಲ್ಲಿ ಜಿ.ಟಿ. ದೇವೇಗೌಡ ಬಣ ಹಿಡಿತ ಹೊಂದಿದೆ. ಈ ಬಾರಿಯೂ ತಮ್ಮ ಆಪ್ತರಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಜಿ.ಟಿ. ದೇವೇಗೌಡ ಅವರು ಕಸರತ್ತು ನಡೆಸುತ್ತಿದ್ದಾರೆ. ನಾಮನಿರ್ದೇಶಿತ ಸದಸ್ಯರು ಹಾಗೂ ಸರ್ಕಾರದ ಪ್ರತಿನಿಧಿಗಳ ಬೆಂಬಲದಿಂದ ಅಧಿಕಾರ ಹಿಡಿಯಲು ಕಾಂಗ್ರೆಸ್ ಬೆಂಬಲಿತರು ಪ್ರಯತ್ನ ನಡೆಸುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಗೆಲುವು ಒಲಿಯದೆ ಎಂಬುದು ಕಾದು ನೋಡಬೇಕಾಗಿದೆ.