ಶತಮಾನದ ಸಹಕಾರ ಸಂಘಕ್ಕೆ ಚುನಾವಣೆ ಫಿಕ್ಸ್

2 RPT 1
ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಕಚೇರಿ.
Published on

ರಿಪ್ಪನ್‌ಪೇಟೆ: ಶತಮಾನದ ಇತಿಹಾಸ ಹೊಂದಿರುವ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಚುನಾವಣೆ ಹೋರಾಟಗಾರರಿಬ್ಬರ ಸ್ಪರ್ಧೆಯಿಂದ ರೋಚಕತೆಯನ್ನು ಪಡೆದುಕೊಂಡಿದೆ.
ಸಂಘದ 12 ಜನರ ನಿರ್ದೇಶಕ ಮಂಡಳಿಯ ಆಯ್ಕೆ ಚುನಾವಣೆ ಆಗಸ್ಟ್ 6 ರಂದು ನಡೆಯಲಿದೆ. ನಾಮಪತ್ರ ವಾಪಸಾತಿಗೆ ಆ.1 ಅಂತಿಮ ದಿನವಾಗಿದ್ದು ವಿವಿಧ ಕ್ಷೇತ್ರ ಆಕಾಂಕ್ಷಿಗಳಾಗಿದ್ದ 6 ಜನರು ಉಮೇದುವಾರಿಕೆ ವಾಪಸು ಪಡೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗ ಎ, ಬಿ, ಎಸ್‌ಸಿ, ಎಸ್‌ಟಿ, ಮಹಿಳಾ ಮೀಸಲು ಸ್ಥಾನ ಹಾಗೂ ಸಾಲಗಾರರಲ್ಲದ ಒಂದು ಸ್ಥಾನಗಳಿಗೆ ಒಬ್ಬ ಸದಸ್ಯರು ಉಮೇದುವಾರಿಕೆ ಸಲ್ಲಿಸಿದ್ದರ ಪರಿಣಾಮ ಹಾಲಿ ಅಧ್ಯಕ್ಷ ಎಂ.ಎಂ.ಪರಮೇಶ್ ತಂಡದ ಏಳು ಜನ ಸದಸ್ಯರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಆಡಳಿತ ಮಂಡಳಿಯ ಬಹುಮತ ಸಾಧಿಸಿದ್ದಾರೆ. ಆದರೆ ಇನ್ನುಳಿದ 5 ಸ್ಥಾನಗಳು ಸಾಲಗಾರರ ಸಾಮಾನ್ಯ ಕ್ಷೇತ್ರಗಳಾಗಿದ್ದು ಏಳು ಜನ ಆಕಾಂಕ್ಷಿಗಳು ಸ್ಪರ್ಧೆಯಲ್ಲಿರುವುದರಿಂದ ನಿರ್ದೇಶಕರ ಆಯ್ಕೆ ಚುನಾವಣೆ ಕುತೂಹಲ ಮೂಡಿಸಿದೆ.
1914ರಲ್ಲಿ ಸ್ಥಾಪನೆಗೊಂಡ ಸೊಸೈಟಿ ಪ್ರಸ್ತುತ 50 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುತ್ತಿದೆ. ತನ್ನ ಕಾರ್ಯಚಟುವಟಿಕೆಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿರುವ ಕೆಲವು ಉತ್ತಮ ಸಹಕಾರ ಸಂಘಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜನಾಥಗೌಡ ಬೆಂಬಲಿಗರಾಗಿರುವ, ಕಳೆದ 23 ವರ್ಷಗಳಿಂದ ಸತತವಾಗಿ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಎಂ.ಪರಮೇಶ್ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರೂ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದು ಸಹಕಾರಿ ಸಂಘದ ಆಡಳಿತದಲ್ಲಿ ಹಲವು ವರ್ಷಗಳಿಂದ ತಮ್ಮ ಪ್ರಾಬಲ್ಯ ಹೊಂದಿರುವುದರಿಂದ ಈ ಬಾರಿ ಚುನಾವಣೆಯ ಎಲ್ಲ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದರು. ಆದರೆ ಆಮ್‌ಆದ್ಮಿ ಪಕ್ಷದ ಮುಖಂಡ, ರೈತ ಹೋರಾಟಗಾರ ಕುಕ್ಕಳಲೆ ಈಶ್ವರಪ್ಪ ಗೌಡ ಹಾಗೂ ಜನಜಾಗೃತಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಅವರ ಸ್ಪರ್ಧೆಯಿಂದ ಅವಿರೋಧ ಆಯ್ಕೆಗೆ ತಣ್ಣೀರೆರಚಿದ್ದು 5 ಸ್ಥಾನಗಳಿಗೆ ಚುನಾವಣೆ ಅನಿವಾರ್ಯವಾಗಿದೆ.
ಪ್ರತಿ ಬಾರಿ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಯಲ್ಲಿ ಎಂ.ಎಂ. ಪರಮೇಶ್ ತಂಡಕ್ಕೆ ಪೈಪೋಟಿ ನೀಡುತ್ತಿದ್ದವು. ಆದರೆ ಈ ಬಾರಿ ಎರಡೂ ಪಕ್ಷಗಳು ಅಭ್ಯರ್ಥಿಗಳನ್ನು ಹಾಕುವಲ್ಲಿ ವಿಫಲವಾಗಿ ಎದುರಾಳಿ ತಂಡದ ಅನಾಯಾಸ ಗೆಲುವಿಗೆ ಸಹಕರಿಸಿದಂತಾಗಿದ್ದು ರಾಜಕೀಯ ನಾಯಕರಲ್ಲಿ ಚುನಾವಣೆಗಾಗಿ ಒಳಒಪ್ಪಂದಗಳು ನಡೆದಿವೆ ಎಂಬ ಚರ್ಚೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ಎರಡು ಜನ ಹೋರಾಟಗಾರರ ಸ್ಪರ್ಧೆಯಿಂದ ಚುನಾವಣೆ ನಡೆಯುತ್ತಿದ್ದು ಮತದಾರರಿಂದ ಬದಲಾವಣೆ ಆಗುವುದೇ ಎಂಬುದನ್ನು ಫಲಿತಾಂಶದವರೆಗೂ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net